ವೀರಾಜಪೇಟೆ: ವೀರಾಜಪೇಟೆ ವಿಭಾಗದಲ್ಲಿ ಭಾರೀ ಗಾಳಿ - ಮಳೆ ಮುಂದುವರೆದಿದ್ದು, ನಿನ್ನೆ ದಿನ ಬೆಳಗಿನಿಂದ ಇಂದು ಬೆಳಗಿನ ತನಕ ಒಟ್ಟು ೧೨೬.೮ ಮಿ.ಮೀ. (೫.೧ ಇಂಚು) ಮಳೆ ಸುರಿದಿದ್ದು ಈ ವರ್ಷದ ದಾಖಲೆಯನ್ನು ಮೀರಿಸಿದೆ.
ತೌಕ್ತೆ ಚಂಡಮಾರುತದ ಪರಿಣಾಮವಾಗಿ ಕೇರಳ ಕೊಡಗಿನಲ್ಲಿ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಈ ವಿಭಾಗದಲ್ಲಿ ನೀರಿಲ್ಲದೆ ನೆಲ ಕಚ್ಚುತ್ತಿದ್ದ ಬಾವಿ, ತೋಡು, ಕೆರೆ, ಹಳ್ಳಗಳು ನೀರಿನಿಂದ ತುಂಬಿವೆ. ಬೇತರಿ ಗ್ರಾಮದ ಕಾವೇರಿ ಹೊಳೆಯ ನೀರಿನ ಮಟ್ಟ ಏರಿಕೆಯಾಗುತ್ತಿದ್ದು ಇಂದು ಬೆಳಗಿನ ೧೦ ಗಂಟೆಗೆ ಸೇತುವೆಯ ಮೇಲ್ಮಟ್ಟದಿಂದ ೫ ಅಡಿ ಕೆಳಭಾಗದಲ್ಲಿ ನೀರು ವೇಗವಾಗಿ ಹರಿಯುತ್ತಿದ್ದು ಕದನೂರಿನ ಉಪ ಕಾವೇರಿ ಹೊಳೆಯಲ್ಲಿಯೂ ನೀರಿನ ಮಟ್ಟ ಏರಿಕೆಯಾಗಿದ್ದು ಹರಿಯುವ ನೀರಿನ ವೇಗ ಹೆಚ್ಚಿದೆ.
ವೀರಾಜಪೇಟೆ ವಿಭಾಗದಲ್ಲಿ ನಿನ್ನೆ ರಾತ್ರಿಯಿಂದ ಭಾರೀ ಮಳೆಯ ಆರ್ಭಟ ಹೆಚ್ಚಿದ ಹಿನೆÀ್ನಲೆಯಲ್ಲಿ ಇಲ್ಲಿನ ಚಿಕ್ಕಪೇಟೆಯಲ್ಲಿರುವ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಂಡಿ ರುವುದಾಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ತಿಳಿಸಿದ್ದಾರೆ.
ಎರಡು ದಿನಗಳಿಂದ ಈ ವಿಭಾಗಕ್ಕೆ ಭಾರೀ ಮಳೆಯಾಗುತ್ತಿದೆ. ಇಲ್ಲಿನ ಪಟ್ಟಣ ಪಂಚಾಯಿತಿಗೆ ಬೆಟ್ಟ ಪ್ರದೇಶಗಳಲ್ಲಿ ಯಾವುದೇ ಹಾನಿಯಾದ ಕುರಿತು ದೂರು ಬಂದಿಲ್ಲ. ಮಳೆಯ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಒಂದು ತಂಡ ಕಾರ್ಯೊನ್ಮುಖವಾಗಿದೆ, ಭಾರೀ ಮಳೆಯ ಪರಿಣಾಮ ಬೇತರಿ ಕಾವೇರಿ ಹೊಳೆಯ ವಿಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ವೀರಾಜಪೇಟೆಗೆ ನಲ್ಲಿ ನೀರು ಪೊರೈಕೆಗೆ ಅಡಚಣೆಯಾಗುತ್ತಿದ್ದು ಇದರಿಂದಾಗಿ ದುಬಾರಿ ದರದಲ್ಲಿ ಜನರೇಟ್ರ್ ಬಳಸಿ ನೀರು ಪೊರೈಕೆ ಮಾಡಲಾಗುತ್ತಿದೆ ಎಂದು ಶ್ರೀಧರ್ ತಿಳಿಸಿದರು.
ವೀರಾಜಪೇಟೆ ವಿಭಾಗದಲ್ಲಿ ಭಾರೀ ಮಳೆಯ ಪರಿಣಾಮವಾಗಿ ನಿನ್ನೆ ದಿನ ಮಧ್ಯ ರಾತ್ರಿ ಕೆಲವು ಗಂಟೆಗಳ ತನಕ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.