ಕೂಡಿಗೆ, ಮೇ ೧೬: ಕೋವಿಡ್ ಲಾಕ್‌ಡೌನ್ ಹಿನ್ನೆಲೆ ಜಿಲ್ಲೆಯ ಕೆಲ ಭಾಗಗಳಲ್ಲಿ ಬೆಳೆದ ವಾಣಿಜ್ಯ ಬೆಳೆ ಮತ್ತು ತರಕಾರಿ ಬೆಳೆಗಳು ಹೊರ ರಾಜ್ಯದ ಮಾರುಕಟ್ಟೆ ಮತ್ತು ಹೊರ ಜಿಲ್ಲೆಗೂ ಸರಿಯಾಗಿ ಹೋಗದ ಕಾರಣ ಮತ್ತು ಆ ಬೆಳೆಗಳನ್ನು ಖರೀದಿಸುವವರು ಬಾರದೆ ಹೊಲದಲ್ಲಿ ಅನೇಕ ಬೆಳೆಗಳು ಕೊಳೆಯುವಂತಾಗಿದೆ. ಕೂಡಿಗೆ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಈ ರೀತಿಯ ಘಟನೆ ನಡೆದಿದೆ.

ಕೂಡಿಗೆ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ನಾಗೇಶ್ ಎಂಬವರ ಎರಡೂ ಎಕರೆಗಳಷ್ಟು ಪ್ರದೇಶದಲ್ಲಿ ಲಕ್ಷಗಟ್ಟಲೆ ಹಣವನ್ನು ಖರ್ಚು ಮಾಡಿ ಬೇಸಾಯ ಮಾಡಿದ್ದರು. ಕೋವಿಡ್ ಲಾಕ್‌ಡೌನ್ ಹಿನ್ನೆಲೆ ಖರೀದಿಸುವವರು ಬಾರದೆ ಇರುವುದರಿಂದ ಎರಡು ಎಕರೆ ಪ್ರದೇಶದ ಹೊಲದಲ್ಲಿ ಎಲೆಕೋಸು ಕೊಳೆಯುತ್ತಿದೆ.

ಕಳೆದ ಮೂರು ತಿಂಗಳುಗಳ ಹಿಂದೆ ಕೊಳವೆ ಬಾವಿಯ ನೀರನ್ನು ಉಪಯೋಗಿಸಿಕೊಂಡು ಎಲೆಕೋಸು ಬೆಳೆಯನ್ನು ಬೆಳೆಯಲಾಗಿದೆ. ಕೋವಿಡ್ ಲಾಕ್‌ಡೌನ್ ಇರುವುದರಿಂದ ಯಾರು ಸಹ ಖರೀದಿಗೆ ಬರುತ್ತಿಲ್ಲ. ಇದರಿಂದಾಗಿ ಭಾರೀ ನಷ್ಟವಾಗಿದೆ ಎಂದು ಸೀಗೆಹೊಸೂರು ಗ್ರಾಮ ಎಲೆಕೋಸು ಬೆಳೆದ ರೈತ ನಾಗೇಶ್ ತನ್ನ ಅಳಲನ್ನು ತೋಡಿಕೊಂಡರು.

ಅರೆ ಮಲೆನಾಡು ಪ್ರದೇಶವಾದ ಹೆಬ್ಬಾಲೆ, ತೊರೆನೂರು, ಅಳುವಾರ, ಸೀಗೆಹೊಸೂರು, ಮದಲಾಪುರ ವ್ಯಾಪ್ತಿಯಲ್ಲಿ ಎಲೆಕೋಸು ಬೆಳೆಯು ಬಿಸಿಲಿನ ತಾಪದ ಅನುಗುಣವಾಗಿ ಉತ್ತಮವಾಗಿ ಬೆಳೆಯು ಬರುತ್ತದೆ.

ಅದರಿಂದಾಗಿ ಈ ಭಾಗದ ಅನೇಕ ರೈತರು ಮುಖ್ಯ ಬೆಳೆಯ ಜೊತೆಯಲ್ಲಿ ಉಪ ಬೆಳೆಯಾಗಿ ಎಲೆಕೋಸು, ಸಿಹಿಗೆಣಸು, ಕೆಸ ಮುಂತಾದ ಅನೇಕ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ಸೀಗಬೇಕಾದ ಬೆಲೆ ಸಿಗುತ್ತಿಲ್ಲಾ ಎಂಬುದು ರೈತರ ನೋವಾಗಿದೆ.

- ಕೆ.ಕೆ. ನಾಗರಾಜಶೆಟ್ಟಿ.