ಸೋಮವಾರಪೇಟೆ: ಸೋಮವಾರಪೇಟೆ ತಾಲೂಕು ಜಾನಪದ ಪರಿಷತ್ ವತಿಯಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ೩೫ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಪರಿಷತ್‌ನ ತಾಲೂಕು ಅಧ್ಯಕ್ಷ ಕೆ.ಎ. ಪ್ರಕಾಶ್ ಅವರು ಪರಿಷತ್ ಮೂಲಕ ಉಚಿತವಾಗಿ ಕಿಟ್‌ಗಳನ್ನು ವಿತರಿಸಿದರು. ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ಹಾನಗಲ್ಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೊರೊನಾ ವೈರಸ್‌ಗೆ ಸುತ್ತಾಗಿ ಸೀಲ್‌ಡೌನ್ ಮಾಡಲಾಗಿರುವ ಬಡ ಕುಟುಂಬಗಳಿಗೆ ಕಿಟ್‌ಗಳನ್ನು ನೀಡಲಾಯಿತು. ಈ ಸಂದರ್ಭ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ವಿಜಯ್ ಹಾನಗಲ್, ಉಪಾಧ್ಯಕ್ಷ ದಾಮೋದರ್, ಕಾರ್ಯದರ್ಶಿ ಎಂ.ಎ. ರುಬೀನಾ ಅವರುಗಳು ಇದ್ದರು.

ಸಿದ್ದಾಪುರ: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿ ಸೀಲ್‌ಡೌನ್ ಆದ ೧೬ ಕ್ಕೂ ಅಧಿಕ ಕುಟುಂಬಗಳಿಗೆ ಅಲ್ಲಿನ ಸಾಗರ ಯೂತ್ ಆರ್ಟ್ ಮತ್ತು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಗತ್ಯ ವಸ್ತುಗಳ ಕಿಟ್‌ಗಳನ್ನು ವಿತರಿಸಲಾಯಿತು. ಸಾಗರ್ ಯೂತ್ಸ್ ಆರ್ಟ್ ಮತ್ತು ಸ್ಪೋರ್ಟ್ಸ್ ಕ್ಲಬ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿ ದಾನಿಗಳಿಂದ ಸಂಗ್ರಹಿಸಿದ ಆಹಾರ ಪದಾರ್ಥಗಳನ್ನು ಸೀಲ್‌ಡೌನ್ ಆದ ಕುಟುಂಬಗಳಿಗೆ ವಿತರಿಸಿದರು. ಈ ಸಂದರ್ಭ ಕ್ಲಬ್‌ನ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಹಾಜರಿದ್ದರು.

ಸೋಮವಾರಪೇಟೆ: ಕೊರೊನಾ ಸೋಂಕಿಗೆ ತುತ್ತಾಗಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಐಗೂರು ಗ್ರಾಮದ ೭ ಕುಟುಂಬಗಳಿಗೆ ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ ಅವರು ಆಹಾರ ಸಾಮಗ್ರಿಗಳ ನೆರವು ಒದಗಿಸಿದರು.

ಸೀಲ್‌ಡೌನ್ ಆಗಿರುವ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸಿದ ವಿ.ಎಂ. ವಿಜಯ ಅವರು, ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ, ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣ ವೈದ್ಯರಿಗೆ ಮಾಹಿತಿ ನೀಡಿ ಎಂದು ಸಲಹೆ ನೀಡಿದರು. ಈ ಸಂದರ್ಭ ಗ್ರಾ.ಪಂ. ಸದಸ್ಯ ಜಿ.ಕೆ. ವಿನೋದ್, ಪ್ರಮುಖರಾದ ಶಿವದಾಸ್, ಪಿ.ಡಿ. ಪ್ರಕಾಶ್, ಅಯ್ಯಪ್ಪ ಅವರುಗಳು ಇದ್ದರು.

ಗುಡ್ಡೆಹೊಸೂರು: ಕುಶಾಲನಗರದ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ಸುಮಾರು ಒಂದು ವಾರದಿಂದ ಕುಶಾಲನಗರ ಮತ್ತು ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ತೆರಳಿ ಕೊರೊನಾ ವೈರಸ್ ಶಮನಕ್ಕೆ ಸರಿಸಾಟಿಯಾದ ಮನೆಯಲ್ಲಿ ತಯಾರಿಸಿದ ಕಷಾಯವನ್ನು ವಿತರಿಸಲಾಯಿತು.

ಗುಡ್ಡೆಹೊಸೂರಿನಲ್ಲಿ ಸಂಜೆ ಸಮಯದಲ್ಲಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಇಲಾಖೆಯವರಿಗೆ ಮತ್ತು ಸಾರ್ವಜನಿಕರಿಗೆ ವಿತರಿಸಲಾಯಿತು. ಈ ಸಂದರ್ಭ ಸಂಸ್ಥೆಯ ಕುಶಾಲನಗರದ ಚಂದ್ರಶೇಖರ್, ಚಂದ್ರು, ಅಶೋಕ್ ಮುಂತಾದವರು ಹಾಜರಿದ್ದರು. ಗ್ರಾಮಾಂತರ ಠಾಣೆಯ ಉಮೇಶ್, ಉದಯ್, ಪಾಪಣ್ಣ, ಗ್ರಾ.ಪಂ. ಸಿಬ್ಬಂದಿ ವಿಜಯ್, ಸ್ಥಳೀಯರಾದ ಬಿ.ಎಂ. ಸಂತೋಷ್ ಮುಂತಾದವರು ಹಾಜರಿದ್ದರು. ನಿರಂತರವಾಗಿ ಈ ಕಾರ್ಯವನ್ನು ಮಾಡುವುದಾಗಿ ಈ ಸಂದರ್ಭ ಚಂದ್ರಶೇಖರ್ ತಿಳಿಸಿದರು.

ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರೊನಾ ಸೋಂಕಿತ ೧೧ ಬಡ ಕುಟುಂಬದವರಿಗೆ ಕೂಡುಮಂಗಳೂರು ಗ್ರಾ.ಪಂ. ಸದಸ್ಯ ಕೆ.ಕೆ. ಭೋಗಪ್ಪ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯ ಮಾಹಿತಿಯ ಮೇರೆಗೆ ೧೦ ಕೆ.ಜಿ. ಅಕ್ಕಿ ಮತ್ತು ಕೆಲ ದಿನಸಿ ಪದಾರ್ಥಗಳನ್ನು ಉಚಿತವಾಗಿ ವಿತರಣೆ ಮಾಡಿದರು.

ಗೋಣಿಕೊಪ್ಪ ವರದಿ: ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ೬ನೇ ವಿಭಾಗದ ಕೃಷ್ಣನಗರ ಕೋವಿಡ್ ಪಾಸಿಟಿವ್ ಇರುವ ಕುಟುಂಬಕ್ಕೆ ಸ್ಥಳೀಯರಿಂದ ಅಗತ್ಯವಸ್ತುಗಳ ಕಿಟ್ ವಿತರಣೆ ಮಾಡಲಾಯಿತು.

ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸದಸ್ಯರಾದ ಅಡ್ಡಂಡ ನಿಲನ್, ಗಿರಿಜಾ ವೆಂಕಟೇಶ್, ಮಚ್ಚಮಾಡ ವಿಮಲ, ರಮೇಶ, ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮತ್ರಂಡ ಕಬೀರ್‌ದಾಸ್, ತಾಲೂಕು ಪ್ರಧಾನ ಕಾರ್ಯದರ್ಶಿ ತೋರೀರ ವಿನು ಇತರರಿದ್ದರು.