ಸೋಮವಾರಪೇಟೆ,ಮೇ.೧೬: ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕವಿದ್ದರೂ ತಜ್ಞರ ಕೊರತೆಯಿಂದ ರೋಗಿಗಳ ಉಪಯೋಗಕ್ಕೆ ಲಭ್ಯವಾಗುತ್ತಿಲ್ಲ ಎಂಬ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು, ತಕ್ಷಣವೇ ಸೋಮವಾರಪೇಟೆ ಆಸ್ಪತ್ರೆಗೆ ತಜ್ಞವೈದ್ಯರನ್ನು ನೇಮಕ ಮಾಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು.

ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಟ್ಟಿರುವ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ಕೋವಿಡ್ ವಿಭಾಗಕ್ಕೆ ಭೇಟಿ ನೀಡಿದ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು, ಆಸ್ಪತ್ರೆಯಲ್ಲಿರುವ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಆಸ್ಪತ್ರೆಯಲ್ಲಿ ಮೂರು ಬೆಡ್‌ಗಳ ತೀವ್ರ ನಿಗಾ ಘಟಕವಿದ್ದರೂ ತಜ್ಞ ವೈದ್ಯರ ಅಲಭ್ಯತೆಯಿಂದಾಗಿ ಸಾರ್ವಜನಿಕ ರೋಗಿಗಳ ಉಪಯೋಗಕ್ಕೆ ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆ ತಕ್ಷಣ ಜಿಲ್ಲೆಯಲ್ಲಿರುವ ತಜ್ಞ ವೈದ್ಯರೊಬ್ಬರನ್ನು ಕೂಡಲೇ ಇಲ್ಲಿಗೆ ನೇಮಕ ಮಾಡುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಕೆ. ಮೋಹನ್ ಅವರಿಗೆ ನಿರ್ದೇಶನ ನೀಡಿದರು.

ಕೋವಿಡ್ ಕೇರ್ ಸೆಂಟರ್‌ನಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವವರ ಮಾಹಿತಿಯನ್ನು ಆಸ್ಪತ್ರೆಯ ಆಡಳಿತಾಧಿಕಾರಿ ರವೀಂದ್ರ ಅವರಿಂದ ಪಡೆದು, ಎಲ್ಲರಿಗೂ ಗುಣಮಟ್ಟದ ಆಹಾರವನ್ನು ಒದಗಿಸಬೇಕು. ಯಾರೂ ಉಪವಾಸದಿಂದ ಇರಬಾರದು ಎಂದ ಸಚಿವರು, ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಕೂಡಲೇ ಸಿ.ಸಿ. ಕ್ಯಾಮೆರ ಅಳವಡಿಸಲು ಸೂಕ್ರ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಸೂಚಿಸಿದರು. ಆಸ್ಪತ್ರೆ ಆವರಣದಲ್ಲಿರುವ ಗುಂಡಿಗಳನ್ನು ಕೂಡಲೇ ಮುಚ್ಚಿ ಸರಾಗ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ತಹಶೀಲ್ದಾರ್ ಗೋವಿಂದರಾಜು ಅವರಿಗೆ ತಿಳಿಸಿದರು. ಇದೇ ಸಂದರ್ಭ ಸೇವಾ ಭಾರತಿಯ ಮಹೇಶ್ ತಿಮ್ಮಯ್ಯ ಅವರು ಕರ್ಕಳ್ಳಿ ಗ್ರಾಮದ ಸ್ಮಶಾನದಲ್ಲಿ ಮೃತದೇಹಗಳನ್ನು ಸುಡಲು ಸಿಲಿಕಾನ್ ಛೇಂಬರ್‌ನ ಅವಶ್ಯಕತೆಯಿದ್ದು, ಸರ್ಕಾರದಿಂದ ವ್ಯವಸ್ಥೆ ಮಾಡುವಂತೆ ಮನವಿ ಸಲ್ಲಿಸಿದರು. ಸಾರ್ವಜನಿಕ ಸ್ಮಶಾನದಲ್ಲಿ ಸಿಲಿಕಾನ್ ಛೇಂಬರ್‌ನ ಅಳವಡಿಕೆ ಅತ್ಯವಶ್ಯಕವಾಗಿರುವುದರಿಂದ ತಕ್ಷಣವೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ತಹಶೀಲ್ದಾರ್‌ಗೆ ನಿರ್ದೇಶನ ನೀಡಿದರು. ಹಲವಷ್ಟು ಮಂದಿ ಅರ್ಚಕರ ಪಡಿತರ ಚೀಟಿ ರದ್ದಾಗಿದ್ದು, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಸಿಗುತ್ತಿಲ್ಲ. ಕೂಡಲೇ ವ್ಯವಸ್ಥೆ ಮಾಡಿ ಕೊಡಬೇಕೆಂದು ಕೊಡಗು ಜಿಲ್ಲಾ ಅರ್ಚಕರ ಸಂಘದ ಅಧ್ಯಕ್ಷ ಮೋಹನ್‌ಮೂರ್ತಿ ಅವರು ಸಚಿವರಿಗೆ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರ ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಉಚಿತ ಪಡಿತರ ನೀಡುತ್ತಿದೆ. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಈವರೆಗೆ ಚೀಟಿ ಪಡೆಯದ ಮಂದಿ ಸೇರಿದಂತೆ ಇತರ ಕಾರಣಗಳಿಂದ ಪಡಿತರ ಸಿಗದವರಿಂದ ಮನವಿ ಸ್ವೀಕರಿಸಿ ತಕ್ಷಣ ಪಡಿತರ ವಿತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭ ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಡಿವೈಎಸ್‌ಪಿ ಶೈಲೇಂದ್ರ, ವೈದ್ಯರುಗಳಾದ ಸತೀಶ್‌ಕುಮಾರ್, ಶುಶ್ರೂತ, ಮತ್ತಿತರರು ಇದ್ದರು.