ಗೋಣಿಕೊಪ್ಪಲು, ಮೇ ೧೬: ಕೊರೊನಾ ಪಾಸಿಟಿವ್ ವ್ಯಕ್ತಿಗಳ ಗಂಟಲು ದ್ರವ ಪರೀಕ್ಷೆಯನ್ನು ಆಶಾ ಕಾರ್ಯಕರ್ತೆಯರ ಮೂಲಕ ಮಾಡಿಸಲಾಗುತ್ತಿದೆ ಎಂದು ರೈತ ಸಂಘದ ಮುಖಂಡರು ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ತಿಳಿಸಿದರು. ದ.ಕೊಡಗಿನ ವಿವಿಧ ಕೋವಿಡ್ ಸೆಂಟರ್‌ಗಳಿಗೆ ಭೇಟಿ ನೀಡಲು ಆಗಮಿಸಿದ ಸಚಿವರನ್ನು ಗೋಣಿಕೊಪ್ಪಲುವಿನ ಆರ್.ಎಂ.ಸಿ.ಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ ಮುಂದಾಳತ್ವದಲ್ಲಿ ಭೇಟಿ ಮಾಡಿ ಕೋವಿಡ್ ಪರಿಸ್ಥಿತಿ ಬಗ್ಗೆ ಗಮನ ಸೆಳೆದರು.

ಅನುಭವವಿಲ್ಲದ ಆಶಾ ಕಾರ್ಯಕರ್ತೆಯರನ್ನು ನಿಯಮ ಬಾಹಿರವಾಗಿ ಕೋವಿಡ್ ಗಂಟಲು ದ್ರವ ಪರೀಕ್ಷೆ ಮಾಡಲು ಅಧಿಕಾರಿಗಳು ಜವಾಬ್ದಾರಿ ನೀಡಿದ್ದಾರೆ ಇದರಿಂದ ನಾಗರಿಕರಿಗೆ ತೊಂದರೆ ಉಂಟಾದಲ್ಲಿ ಇದರ ಜವಾಬ್ದಾರಿ ಯಾರ ಹೊಣೆ.? ಎಂದು ಪ್ರಶ್ನಿಸಿದರು.

ಸ್ಥಳದಲ್ಲಿದ್ದ ಡಿ.ಹೆಚ್.ಓ. ಮೋಹನ್ ಅವರನ್ನು ಕರೆಸಿದ ಸಚಿವರು ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ತಿಳಿಸಿದರು.

ಸ್ಥಳದಲ್ಲಿದ್ದ ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್ ಆಶಾ ಕಾರ್ಯಕರ್ತೆಯರು ಒಂದೇ ದಿನ ನೂರಾರು ಮಂದಿಗೆ ಗಂಟಲು ದ್ರವ ಪರೀಕ್ಷೆ ಮಾಡುತ್ತಿದ್ದ ವಿಡಿಯೋ ಸಹಿತ ಸಚಿವರ ಗಮನ ಸೆಳೆದರು ವಿಡಿಯೋ ಗಮನಿಸಿದ ನಂತರ ಸಚಿವರು ಡಿ.ಎಚ್.ಓ. ಮೋಹನ್ ಅವರನ್ನು ವಿಚಾರಿಸಿದರು. ಇನ್ನು ಮುಂದೆ ಇಂತಹ ಆರೋಪಗಳು ಕೇಳಿ ಬರಬಾರದು; ನಿಯಮಾನುಸಾರ ಅನುಭವಿ ಆರೋಗ್ಯ ಸಿಬ್ಬಂದಿಗಳಿAದಲೇ ಪರೀಕ್ಷೆಗಳು ನಡೆಯಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು. ಸ್ಥಳದಲ್ಲಿದ್ದ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಇನ್ನು ಮುಂದೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವಂತೆ ಸೂಚನೆ ನೀಡಿದರು.

ಈ ವೇಳೆ ತಾಲೂಕು ವೈದ್ಯಾಧಿಕಾರಿಗಳಾದ ಡಾ.ಯತಿರಾಜ್ ಎಂ.ಎಲ್.ಸಿ.ಸುನೀಲ್ ಸುಬ್ರಮಣಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಪ್ರಮುಖರಾದ ಗಿರೀಶ್ ಗಣಪತಿ, ಮಲ್ಲಂಡ ಮಧು ದೇವಯ್ಯ, ಗುಮ್ಮಟೀರ ಕಿಲನ್ ಗಣಪತಿ, ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

- ಹೆಚ್.ಕೆ.ಜಗದೀಶ್