ಸಿದ್ದಾಪುರ , ಮೇ ೧೬: ಕಾಡಾನೆಗಳ ಹಾವಳಿ ವಿಪರೀತವಾಗಿರುವ ಹಿನ್ನೆಲೆ ಯಲ್ಲಿ ತೋಟ ಕಾರ್ಮಿಕ ರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಹೆಚ್ಚಿನ ಸಮಯಾವಕಾಶ ನೀಡಬೇಕೆಂದು ಐ.ಎನ್.ಟಿ.ಯು.ಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ವೀರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿಪರೀತವಾದ ಕಾಡಾನೆ ಹಾವಳಿಯಿದ್ದು ಕಾರ್ಮಿಕರು ತೋಟಗಳಿಂದ ಹೊರ ಬರಲು ಬೆಳಿಗ್ಗೆ ೮ ಗಂಟೆವರೆಗೆ ಕಾಯ ಬೇಕಾಗಿದೆ. ೧೦ಗಂಟೆಯ ವರೆಗೆ ಮಾತ್ರ ಅಗತ್ಯವಸ್ತುಗಳ ಖರೀದಿಗೆ ಸಮಯ ನಿಗದಿಪಡಿಸಿರುವುದರಿಂದ ಬಹಳ ತೊಂದರೆ ಎದುರಿಸ ಬೇಕಾಗಿದೆ.
ಈ ಭಾಗದ ಕಾರ್ಮಿಕರ ಪರಿಸ್ಥಿತಿಯನ್ನು ಮನಗಂಡು ಅಗತ್ಯ ವಸ್ತುಗಳ ಖರೀದಿ ಸಮಯವನ್ನು ವಿಸ್ತರಿಸ ಬೇಕು ಅಥವಾ ಈ ಭಾಗದ ಕಾರ್ಮಿಕರ ವಸತಿ ಪ್ರದೇಶಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳ ಬೇಕೆಂದು ನಾಪಂಡ ಮುತ್ತಪ್ಪ ರವರು ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.