*ಗೋಣಿಕೊಪ್ಪಲು: ಎರಡು ದಿನಗಳಿಂದ ಬಿದ್ದ ನಿರಂತರ ಮಳೆಗೆ ನಿರ್ಮಾಣ ಹಂತಲ್ಲಿದ್ದ ಪೊನ್ನಂಪೇಟೆ - ಹುದಿಕೇರಿ ಮಖ್ಯರಸ್ತೆಯ ಮಾಪಿಳ್ಳೆತೋಡು ಸೇತುವೆ ದಡ ಕಸಿದು ಬಿದ್ದಿದೆ.
ಪೊನ್ನಂಪೇಟೆ, ಶ್ರೀಮಂಗಲ, ಕುಟ್ಟ ನಡುವಿನ ಅಂತರರಾಜ್ಯ ಹೆದ್ದಾರಿಯ ಮಾಪಿಳ್ಳೆತೋಡು ಸೇತುವೆ ಕಾಮಗಾರಿ ಒಂದು ವರ್ಷದಿಂದ ನಡೆಯುತ್ತಿತ್ತು. ಕುಂಟುತ್ತಾ ಸಾಗುತ್ತಿದ್ದ ಈ ಸೇತುವೆ ಮುಖ್ಯಭಾಗ ಈಚಿಗೆ ಮುಗಿದಿತ್ತು. ಸೇತುವೆ ಎರಡು ಬದಿಯ ಕಾಮಗಾರಿ ಪ್ರಗತಿಯಲ್ಲಿತ್ತು. ದಡಕ್ಕೆ ಕಲ್ಲು ಮಣ್ಣು ಹಾಕಿದ ಬಳಿಕ ಕಾಂಕ್ರಿಟ್ ನಡೆದಿತ್ತು. ಇದರ ಕ್ಯೂರಿಂಗ್ ನಡೆಯುತ್ತಿತ್ತು. ಸೇತುವೆ ತಿರುವಿಗೆ ರಕ್ಷಣಾತ್ಮಕ ಕಂಬಿಗಳನ್ನು ಅಳವಡಿಸಲಾಗಿತ್ತು. ಆದರೆ ವಾಹನಗಳ ಓಡಾಟಕ್ಕೆ ತೆರೆದಿರಲಿಲ್ಲ.
ಅಷ್ಟರಲ್ಲಿ ದಿಢೀರನೆ ಎದುರಾದ ಮಳೆಗೆ ಸೇತುವೆ ಒಂದು ಬದಿಯ ದಡ ಕುಸಿದು ಬಿದ್ದಿದೆ. ಶುಕ್ರವಾರ ರಾತ್ರಿಯಿಂದ ಭಾನುವಾರ ಮುಂಜಾನೆವರೆಗೆ ಎಡೆಬಿಡದೆ ಸುರಿದ ಮಳೆಗೆ ತೋಡಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ದಡ ಕುಸಿದಿದೆ. ಕೇರಳದ ಗಡಿಭಾಗದಲ್ಲಿರುವ ಶ್ರೀಮಂಗಲ, ಹುದಿಕೇರಿ, ಪೊನ್ನಂಪೇಟೆ ಭಾಗಕ್ಕೆ ಎರಡು ದಿನಗಳ ಕಾಲ ಮಳೆ ರಭಸವಾಗಿಯೇ ಬಿದ್ದಿತು. ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾನೆವರೆಗೆ ಮತ್ತಷ್ಟು ಜೋರಾಗಿತ್ತು.
ನಾಗರಹೊಳೆ ಅರಣ್ಯದಂಚಿನಲ್ಲಿರುವ ಬಾಳೆಲೆ, ಕಾರ್ಮಾಡು, ನಿಟ್ಟೂರು, ತಿತಿಮತಿ, ದೇವಮಚ್ಚಿ, ಚೊಟ್ಟೆಪಾರೆ, ಪಾಲಿಬೆಟ್ಟ ಮೊದಲಾದ ಭಾಗಗಳಿಗೆ ಉತ್ತಮ ಮಳೆಯಾಗಿದೆ. ಗಾಳಿ ಇಲ್ಲದ್ದರಿಂದ ಯಾವುದೇ ಹಾನಿಯಾಗಲಿಲ್ಲ.