ವಿಶೇಷ ಲೇಖನ : ಕೆ.ಎಸ್. ಮೂರ್ತಿ
ಕಣಿವೆ, ಮೇ ೧೬: ಹಿಂದೆ ನಮ್ಮ ಪೂರ್ವಜರು ಯಾವುದೇ ರೋಗ ರುಜಿನಗಳಿಗೆ ತುತ್ತಾಗದೇ ನೂರಾರು ಕಾಲ ಸುಖ, ಶಾಂತಿ ಹಾಗೂ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದರು.
ಆದರೆ ಕಳೆದ ಮೂರ್ನಾಲ್ಕು ದಶಕಗಳ ಈಚೆಗೆ ಆಧುನಿಕತೆಯ ಆಯಾಮಗಳು ಒಂದೊAದೇ ತೆರೆದುಕೊಂಡ ಬಳಿಕ ಜನಜೀವನ ಹಾಗೂ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮ ಊಹಿಸಲೂ ಸಾಧ್ಯವಿಲ್ಲ.
ಅಂದರೆ ಹಿಂದೆ ನಮ್ಮ ಪೂರ್ವಜರ ಜೀವನ ಪದ್ಧತಿಯೇ ಹಾಗಿತ್ತು. ಹಿಂದೆ ಸಂಚಾರಕ್ಕೆ ಎತ್ತಿನ ಗಾಡಿಯನ್ನು ಅಳವಡಿಸಿಕೊಂಡಿದ್ದರು.
ಅAದರೆ ಅಂದು ರಸ್ತೆಗಳೂ ಸುಧಾರಿಸಿರಲಿಲ್ಲ. ಹಾಗಾಗಿ ವಾಹನಗಳು ಹಾಗೂ ಸಾರ್ವಜನಿಕ ಸಾರಿಗೆಯೂ ಕೂಡ ಸುಧಾರಣೆಯಾಗಿರಲಿಲ್ಲ.
ಅಂದು ಪ್ರಕೃತಿ ಮನುಷ್ಯನಿಗೆ ಬೇಡಿದ್ದನ್ನೆಲ್ಲಾ ನೀಡುತ್ತಿತ್ತು. ಆದರೆ ಇಂದು ಹಾಗಿಲ್ಲ. ಮನುಷ್ಯ ತಾನೊಂದು ಬೇಡಿದರೆ ಪ್ರಕೃತಿ ಬೇರೊಂದನ್ನೇ ನೀಡುತ್ತಿದೆ. ಅಂದರೆ ಅಷ್ಟರಮಟ್ಟಿಗೆ ನಾವು ಪರಿಸರವನ್ನು ಹಾಳುಗೆಡವಿದ್ದೇವೆ.
ಹಿಂದೆ ಪೂರ್ವಜರು ಅಡುಗೆ ಸಿದ್ಧಪಡಿಸಲು ಕಟ್ಟಿಗೆಗಳನ್ನು ಬಳಸುತ್ತಿದ್ದರು. ಕುಡಿಯುವ ನೀರು ಹೇಗಿತ್ತೆಂದರೆ ಹರಿಯುವ ನದಿಯಲ್ಲಷ್ಟೇ ಅಲ್ಲ. ಕೆರೆ ಕಟ್ಟೆಗಳಲ್ಲಿನ ನೀರನ್ನು ನೇರವಾಗಿ ಬೊಗಸೆಯಲ್ಲಿ ಕುಡಿದರೂ ಯಾವುದೇ ಸಾಂಕ್ರಾಮಿಕಗಳ ಬಾಧೆ ಇರಲಿಲ್ಲ. ಆಹಾರದ ವಿಚಾರಕ್ಕೆ ಬಂದಲ್ಲಿ ಕಲ್ಲುಗಳಿಂದ ಮಸಾಲೆ ಪದಾರ್ಥಗಳನ್ನು ರುಬ್ಬಿ ಸಿದ್ಧಪಡಿಸುತ್ತಿದ್ದ ತಿನಿಸುಗಳು ಅದೆಂತಹ ಸವಿ ರುಚಿಯಿಂದ ಕೂಡಿತ್ತು...! ಅಬ್ಬಾ ಈಗಲೂ ಅದನ್ನು ನೆನಪಿಸಿಕೊಂಡರೆ ಬಾಯಲ್ಲಿ ನೀರೂರುತ್ತದೆ.
ಹಿಂದೆ ಹೆಚ್ಚು ಬಳಸುತ್ತಿದ್ದ ಗೆಡ್ಡೆ ಗೆಣಸುಗಳು, ರಾಗಿ ಹಾಗೂ ದ್ವಿದಳ ಧಾನ್ಯಗಳನ್ನು ರಾಗಿಕಲ್ಲಿನಿಂದ ಒಡೆದು ಪುಡಿ ಮಾಡಿ ಬೇಯಿಸಿ ತಿನ್ನಲು ಬಳಸಲಾಗುತ್ತಿತ್ತು. ಭತ್ತವನ್ನು ಒನಕೆಯಲ್ಲಿ ಕುಟ್ಟಿ ಅಕ್ಕಿಯನ್ನು ಮಾಡಿ ಅನ್ನ ಬೇಯಿಸಲಾಗುತ್ತಿತ್ತು.
ಹಿಂದೆ ಪೂರ್ವಜರು ಅವಿಭಕ್ತ ಕುಟುಂಬಗಳನ್ನು ಹೆಚ್ಚು ಆಶ್ರಯಿಸಿದ್ದರು. ಮನೆ ತುಂಬಾ ಮಕ್ಕಳು ಮೊಮ್ಮಕ್ಕಳು ಇರುತ್ತಿದ್ದರು. ಶಾಲಾ-ಕಾಲೇಜುಗಳ ಕೊರತೆ ಇದ್ದರೂ ಅದೆಂತಹ ಸಂಸ್ಕಾರವAತ ಬದುಕು ಮನೆಯಲ್ಲೇ ರೂಪುಗೊಳ್ಳುತ್ತಿತ್ತು. ಅಂದು ಮಕ್ಕಳು ದಿನವಿಡೀ ಆಟವಾಡಿ ನಕ್ಕು ನಲಿದು ಮುಸ್ಸಂಜೆಯ ನಂತರ ಮನೆ ಸೇರುತ್ತಿದ್ದರು. ಅಂದು ಮಕ್ಕಳ ಕೈಯಲ್ಲಿ ಮೊಬೈಲ್, ಪೆನ್ಡ್ರೆöÊವ್, ಇಂಟರ್ನೆಟ್, ಕಂಪ್ಯೂಟರ್ಗಳ ಗೊಡವೆ ಇರಲಿಲ್ಲ.
ಆಸ್ಪತ್ರೆಗಳು ವಿರಳವಾಗಿದ್ದ ಆ ಕಾಲದಲ್ಲಿ ನಾಟಿ ವೈದ್ಯ ಪದ್ಧತಿ ಜನ ಜೀವನವನ್ನು ಆರೋಗ್ಯದಾಯಕವಾಗಿಸಿತ್ತು. ಆದರೆ ಕಾಲ ಬದಲಾದಂತೆ ಪಾರಂಪರಿಕ ಪದ್ಧತಿಗಳು ಬದಲಾಗತೊಡಗಿದವು. ಇಡೀ ಮನುಷ್ಯನ ಬದುಕು ಯಾಂತ್ರೀಕರಣಗೊAಡಿತು. ಆರೋಗ್ಯವನ್ನು ಕೊಡಮಾಡಿದ್ದ ಮನೆಗಳಲ್ಲಿನ ಹಳೆಯ ಒಳ ಕಲ್ಲು, ರಾಗಿಕಲ್ಲು, ಕುಟ್ಟುವ ಕಲ್ಲುಗಳ ಜಾಗವನ್ನು ಮಿಕ್ಸಿ, ಕುಕ್ಕರ್, ಹಲ್ಲರ್ ಮಿಲ್ಗಳು ಅತಿಕ್ರಮಿಸಿಕೊಂಡವು.
ಎತ್ತಿನಗಾಡಿ ಸಂಚಾರ ಮೂಲೆ ಸೇರಿ ಮನೆ ಮನೆಗೂ ವಾಹನಗಳು ಲಗ್ಗೆ ಇಟ್ಟವು. ಪರಿಸರ ಸಂಪೂರ್ಣ ಅಧೋಗತಿಯತ್ತ ಸಾಗಿತು. ಸುಂದರ ಪರಿಸರವನ್ನು ಕಲುಷಿತಗೊಳಿಸಿ ತಾನು ವೈಭವದಿ ಮೆರೆಯ ಹೊರಟ ಮನುಷ್ಯನಿಗೆ ಪ್ರಕೃತಿ ಇಂದು ಸರಿಯಾದ ಪಾಠವನ್ನೇ ಕಲಿಸ ಹೊರಟಿತು. ತನ್ನ ಸ್ವಾರ್ಥ ಸಂಪಾದನೆಗೆ ಪ್ರಕೃತಿಯನ್ನು ಲೂಟಿ ಗೈದಿದ್ದ ಮನುಷ್ಯನಿಗೆ ಆ ಪ್ರಕೃತಿ ಸರಿಯಾದ ಪಾಠವನ್ನೇ ಕಲಿಸುತ್ತಿದೆ.
ಇನ್ನಿಲ್ಲದ ಸಾಂಕ್ರಾಮಿಕ ರೋಗಗಳು ಮನುಷ್ಯನ ನೆಮ್ಮದಿಯನ್ನು ಕಸಿದಿವೆ. ಹಿಂದೆ ಅಜ್ಜಿ ಮನೆ ಹಾಗೂ ನೆಂಟರಿಷ್ಟರ ಮನೆಗಳಿಗೆ ತೆರಳಿ ವಾರ ಪೂರ್ತಿ, ತಿಂಗಳು ಪೂರ್ತಿ ಕಾಲ ಕಳೆದು ಬಂದರೂ ಯಾವುದೇ ಅನಾರೋಗ್ಯ ಬಾಧೆ ಇರಲಿಲ್ಲ. ಇಂದು ಹಾಗಲ್ಲ ಮನೆಬಿಟ್ಟು ಪಕ್ಕದ ಮನೆಯತ್ತಲೂ ತೆರಳುವಂತಿಲ್ಲ. ಮನೆಯ ಬಾಗಿಲ ಹೊರಗೆ ಮುಖಗವಸು ಹಾಕಿ ಓಡಾಡುವಂತಹ ಕೆಟ್ಟ ಕಾಲದಲ್ಲಿ ನಾವಿದ್ದೇವೆಲ್ಲಾ...? ಇನ್ನೂ ಮುಂದಿನ ನಮ್ಮ ಪೀಳಿಗೆಗಳ ಕಥೆ ವ್ಯಥೆಗಳೇನು ? ಊಹಿಸಲೂ ಆಗುತ್ತಿಲ್ಲವಲ್ಲ. ಎಂತಹ ರಣ ಭಯಂಕರ ಕಾಲ ಘಟ್ಟದಲ್ಲಿ ನಾವಿದ್ದೇವೆ ? ಏಕೆ ಮನುಷ್ಯ ಚಿಂತಿಸುತ್ತಿಲ್ಲ? ಇದೂವರೆಗೂ ನಮಗೆ ಹಾಗೂ ನಮ್ಮ ಪೂರ್ವಜರಿಗೆ ಸುಂದರ ಬಾಳು ಕರುಣಿಸಿದ ಪ್ರಕೃತಿಯನ್ನು ಘಾಸಿಮಾಡಿದ್ದು ಸಾಕು. ನದಿ, ಕೆರೆ - ತೊರೆಗಳನ್ನು ಮಲಿನ ಮಾಡಿದ್ದು ಸಾಕು. ಇನ್ನಾದರೂ ನಮ್ಮ ಪಾಡಿಗೆ ನಾವಿದ್ದು, ನಮಗೆ ಮತ್ತೊಮ್ಮೆ ಒಳ್ಳೆಯ ಪರಿಸರವನ್ನು ಕರುಣಿಸೆಂದು ಸಾಮೂಹಿಕವಾಗಿ ನಿಸರ್ಗ ದೇವರಲ್ಲಿ ಪ್ರಾರ್ಥಿಸುವ ಮೂಲಕ ನಮ್ಮಷ್ಟಕ್ಕೆ ನಾವಿರುವ ಸಂಕಲ್ಪ ತೊಡಬಹುದಲ್ಲವೇ...?
ನಿಸರ್ಗದತ್ತವಾಗಿ ಕರುಣಿಸಿದ್ದ ಜಲಮೂಲಗಳನ್ನು ನಾಶಪಡಿಸಿದ ನಾವು ನಮ್ಮ ವೈಯಕ್ತಿಕ ಸ್ವಾರ್ಥಕ್ಕೆ ಭೂಮಿತಾಯಿಯ ಗರ್ಭವನ್ನು ಒಳಹೊಕ್ಕಿ ನೂರಾರು, ಸಾವಿರಾರು ಅಡಿಗಳಷ್ಟು ಆಳಕ್ಕೆ ಯಂತ್ರಗಳನ್ನು ಇಳಿಸಿ ಭೂತಾಯಿಯ ತೀರ್ಥವೆಂಬ ಅಂತರ್ಜಲವನ್ನು ಹಾನಿ ಮಾಡಿದ್ದು ಸಾಕು. ಇಡೀ ಜೀವಸಂಕುಲಕ್ಕೆ ಸುಂದರವಾದ ಆರೋಗ್ಯದಾಯಕವಾದ ಪರಿಶುದ್ಧ ಜೀವ ವಾಯುವನ್ನು ಮಲಿನಗೊಳಿಸಿದ್ದು ಸಾಕು.
ನಾನು - ನನ್ನದು ಎಂದು ಅಹಂಕಾರದಿAದ ಇಡೀ ಭೂಒಡಲನ್ನು ಅತಿಕ್ರಮಿಸಿ ಕಾಂಕ್ರಿಟ್ಮಯ ಮಾಡಿದ್ದು ಸಾಕು. ಭೂಮಿ ಮೇಲಿನ ನಾಲ್ಕು ದಿನದ ಬಾಳುವೆಗೆ ವೈಭೋಗದ ಮನೆಗಳನ್ನು ಕಟ್ಟಲು ಅತ್ಯಮೂಲ್ಯ ಮರಗಳನ್ನು ಕಡಿದುರುಳಿಸಿದ್ದು ಸಾಕು. ಒಟ್ಟಾರೆ ಮಾನವ ಕುಲದ ಮೇಲೆ ಮುನಿದಿರುವ ಪ್ರಕೃತಿ ಮಾತೆಯನ್ನು ಶಾಂತಗೊಳಿಸಿ ಮಾಡಿದ ತಪ್ಪುಗಳು ಪುನರಾವರ್ತನೆಯಾಗದಂತೆ ಇಡೀ ಮನುಕುಲ ಎಚ್ಚರದಿಂದ ಬದುಕುವ ಶಪಥ ತೊಡಬೇಕಿದೆ.
ಪ್ರಕೃತಿಗೆ ಮಾರಕವಾದ ಆಧುನಿಕತೆ ಎಂಬ ರಣ ರಕ್ಕಸನಿಂದ ಆದಷ್ಟು ದೂರವಿರುವ ಪಾರಂಪರಿಕ ಪದ್ಧತಿಗಳಿಗೆ ಮಾರುಹೋಗಬೇಕಿದೆ ಅಷ್ಟೆ. ಏನಂತೀರಾ...?