ವೀರಾಜಪೇಟೆ: ವೀರಾಜಪೇಟೆ- ಮಡಿಕೇರಿ ತಾಲೂಕನ್ನು ಬೆಸೆಯುವ ಬೇತ್ರಿ ಹೆಮ್ಮಾಡು ಬಳಿ ನಿರ್ಮಾಣ ಹಂತದಲ್ಲಿರುವ ಹೊಸ ಸೇತುವೆ ಕಾಮಗಾರಿ ಸಾಮಗ್ರಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಕಳೆದ ೨ ದಿನದಿಂದ ಅರಬ್ಬಿ ಸಮುದ್ರದಲ್ಲಿ ತೌಕ್ತೆ ಚಂಡ ಮಾರುತ ಅಬ್ಬರಿಸುತ್ತಿರುವುದರಿಂದ ಕರಾವಳಿ ಭಾಗವಾದ ಜಿಲ್ಲೆಯಲ್ಲಿ ವಿಪರೀತ ಮಳೆಯಾಗಿ ಕಾವೇರಿ ಹಾಗೂ ಉಪನದಿಗಳು ಹಾಗೂ ತೊರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ನಷ್ಟ ಉಂಟು ಮಾಡಿದೆ.
ಚೆಯ್ಯಂಡಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬೆಮಲೆಯಿಂದ ಚೇಲಾವಾರ, ಚೆಯ್ಯಂಡಾಣೆ, ಬೆಳ್ಳುಮಾಡು ಮೂಲಕ ಹೆಮ್ಮಾಡುವಿನಲ್ಲಿ ಕಾವೇರಿ ನದಿಗೆ ಸೇರುವ ಜಾಗದಲ್ಲಿ ಇದ್ದ ಸೇತುವೆ ಕಿರಿದಾಗಿದ್ದು, ಮಳೆಗಾಲದಲ್ಲಿ ಹೆಮ್ಮಾಡು ಗ್ರಾಮ ದ್ವೀಪದಂತಾಗುತ್ತದೆ. ಒಂದು ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಯಾವುದೇ ಸಮಸ್ಯೆಗಳು ಉಂಟಾದರೂ ಸಂಪರ್ಕಿಸಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡ ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ೨೦೧೯ರಲ್ಲಿ ಸೇತುವೆಯನ್ನು ಮೇಲ್ದರ್ಜೆಗೆ ಏರಿಸಿ ನಬಾರ್ಡ್ ಮೂಲಕ ೧.೩೦ ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನಡೆಸಿದ್ದರು. ಕೋವಿಡ್ ೧೯ ಕಾರÀಣದಿಂದ ಕಾಮಗಾರಿ ವಿಳಂಬವಾಗಿತ್ತು. ೨೦೨೧ರಲ್ಲಿ ಮರು ಚಾಲನೆ ನೀಡಿದ್ದರು. ಸೇತುವೆ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದೆ. ೧೦ ದಿನಗಳ ಹಿಂದೆ ಸೇತುವೆಗೆ ಕಾಂಕ್ರಿಟ್ ಹಾಕಿ ಕ್ಯೂರಿಂಗ್ಗಾಗಿ ಬಿಡಲಾಗಿತ್ತು. ಕಳೆದೆರಡು ದಿನಗಳಿಂದ ಸುರಿದ ಮಳೆಗೆ ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿ ಆಗಿ ಕಾಂಕ್ರಿಟ್ಗಾಗಿ ಬಳಸಿದ್ದ ಸಾಮಗ್ರಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಸೇತುವೆಯ ಒಂದು ಪಾರ್ಶ್ವ ಅಪಾಯದಲ್ಲಿದೆ. ಹೊಸ ಸೇತುವೆ ನಿರ್ಮಾಣ ಮಾಡುವ ಸಲುವಾಗಿ ಸೇತುವೆಯ ತಳಭಾಗದಿಂದ ಮಣ್ಣನ್ನು ಕೊರೆದ ಕಾರಣ ಹಾಲಿ ಇರುವ ಸೇತುವೆಯ ಒಂದು ಬದಿ ನೀರಿನ ಕೊರೆತದಿಂದ ಕುಸಿಯುವ ಹಂತದಲ್ಲಿದೆ. ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದರೆ ಹಾಲಿ ಇರುವ ಸೇತುವೆಯ ಮೇಲೆ ೧೦ ಅಡಿಗೂ ಅಧಿಕ ನೀರು ನಿಲ್ಲುತ್ತದೆ. ಕೂಡಲೇ ಹೊಸ ಸೇತುವೆ ಕಾಮಾಗಾರಿ ಪೂರ್ಣಗೊಳಿಸದಿದ್ದರೆ ಈ ಬಾರಿ ಮಳೆಗಾಲದಲ್ಲಿ ಗ್ರಾಮ ಸಂಪರ್ಕ ಕಳೆದುಕೊಳ್ಳುತ್ತದೆ.
-ಅರೆಯಂಡ ಮೋಹನ್, ಗ್ರಾ.ಪಂ. ಸದಸ್ಯ, ಕಾಕೋಟುಪರಂಬು.
ಸ್ಥಳ ಪರಿಶೀಲನೆ ನಡೆಸಿದ್ದೇನೆ : ಕಾಂಕ್ರಿಟ್ ಹಾಕಿ ೧೫ ದಿನಗಳಾಗಿದೆ. ರೆಡಿಮಿಕ್ಸ್ ಕಾಂಕ್ರಿಟ್ ಬಳಸಿರುವುದರಿಂದ ಬೇಗ ಕ್ಯೂರಿಂಗ್ ಆಗುತ್ತದೆ. ಸೇತುವೆಗೆ ಯಾವುದೇ ತೊಂದರೆ ಆಗುವುದಿಲ್ಲ. ಲಾಕ್ಡೌನ್ ಇದ್ದ ಕಾರಣ ಕಾಮಗಾರಿ ಸ್ವಲ್ವ ಮಟ್ಟಿಗೆ ವಿಳಂಬವಾಗಿದೆ. ನೀರಿನ ಪ್ರಮಾಣ ಸ್ವಲ್ಪ ಕಡಿಮೆ ಆದ ತಕ್ಷಣ ಮಳೆಗಾಲ ಪ್ರಾರಂಭವಾಗುವ ಮೊದಲು ಕಾಮಗಾರಿ ಪೂರ್ಣ ಗೊಳಿಸಲಾಗುವುದು.
-ಮೂವೇರ ಸುರೇಶ್, ಸಹಾಯಕ ಕಾರ್ಯಪಾಲ ಅಭಿಯಂತರ, ಪಿಡಬ್ಲೂö್ಯಡಿ ಇಲಾಖೆ ವಿರಾಜಪೇಟೆ.