 ಉಸ್ತುವಾರಿ ಸಚಿವ ವಿ. ಸೋಮಣ್ಣ ಸೂಚನೆ  ಆಕ್ಸಿಜನ್ ದಾಸ್ತಾನಿಗೆ ನಿರ್ದೇಶ£

ಮಡಿಕೇರಿ, ಮೇ 14: ಕೊಡಗು ಜಿಲ್ಲೆಗೆ ಅಗತ್ಯವಿರುವ ವೈದ್ಯಕೀಯ ಸಿಬ್ಬಂದಿಗಳ ನಿಯೋಜನೆಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಟಾಸ್ಕ್‍ಫೋರ್ಸ್ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ನಿಯಂತ್ರಣಕ್ಕೆ ಸಮರೋಪಾದಿಯಾಗಿ ಕೆಲಸ ನಿರ್ವಹಿಸಬೇಕು. ಜಿಲ್ಲೆಯಲ್ಲಿ 500 ವೈದ್ಯಕೀಯ ಸಿಬ್ಬಂದಿಗಳ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಡೆಯುತ್ತಿರುವ ನೇರ ಸಂದರ್ಶನದಲ್ಲಿ ಸಿಬ್ಬಂದಿಗಳನ್ನು ಶೀಘ್ರವಾಗಿ ನಿಯೋಜಿಸಿಕೊಳ್ಳಿ. ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯಕೀಯ ಕಾಲೇಜು ಮುಖ್ಯಸ್ಥರು ಈ ಸಂದರ್ಭದಲ್ಲಿ ಸಮನ್ವಯತೆ ಸಾಧಿಸಬೇಕು. ಜಿಲ್ಲೆಗೆ ಅಗತ್ಯವಿರುವ ಜಂಬೋ ಸಿಲಿಂಡರ್ ಅನ್ನು ತರಿಸಿಕೊಳ್ಳುವಂತೆ ನಿರ್ದೇಶನ ನೀಡಿದರು.

ವೈದ್ಯಕೀಯ ಸಿಬ್ಬಂದಿ ನಿಯೋಜನೆ ಸಂಬಂಧ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್, ನಿಯೋಜನೆಗೊಳ್ಳುವ ಸಿಬ್ಬಂದಿಗಳಿಗೆ ಯಾವ ರೀತಿ ವೇತನ ನೀಡುವುದು ಈ ಬಗ್ಗೆ ಗೊಂದಲವಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.

ಇದಕ್ಕೆ ಉತ್ತರಿಸಿದ ಸಚಿವರು, ವೇತನ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಜಿಲ್ಲಾಧಿಕಾರಿ ಖಾತೆಯಲ್ಲಿ ಕೋವಿಡ್ ನಿರ್ವಹಣೆಗೆ ಅಗತ್ಯವಾದ ಹಣವಿದೆ. ಸರಕಾರ ಕೂಡ ಹೆಚ್ಚುವರಿಯಾಗಿ ಅನುದಾನ ನೀಡುತ್ತದೆ ಎಂದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕೋವಿಡ್ ನಿರ್ವಹಣೆಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಹಣ ಕಂದಾಯ ಇಲಾಖೆಗೆ ಬಿಡುಗಡೆ ಯಾಗಿದೆ. ಇದನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು.

ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಕಳೆದ ಟಾಸ್ಕ್ ಫೋರ್ಸ್ ಸಭೆಯ ನಡಾವಳಿಯನ್ನು ದಾಖಲಿಸದಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಜನಪ್ರತಿನಿಧಿಗಳ ಸಲಹೆ ಸರಿಯಾಗಿ ಕಾರ್ಯಗತ ವಾಗುತ್ತಿಲ್ಲ. ಸಭೆಯಲ್ಲಿ ಚರ್ಚೆಯಾದ ವಿಚಾರಗಳು ಮರು ಪರಿಶೀಲನೆ ಯಾಗಬೇಕು. ಸರಿಯಾಗಿ ಕೆಲಸ ಮಾಡದಿದ್ದರೆ ಮನೆಗೆ ಹೋಗಿ ಎಂದು ಅಧಿಕಾರಿ ವಿರುದ್ಧ ಕಿಡಿಕಾರಿದರು.

ಹೋಂ ಐಸೋಲೇಷನ್ ನಲ್ಲಿರುವವರು ನಿಯಮ ಉಲ್ಲಂಘನೆ ಮಾಡುತ್ತಿರುವುದು ಕಂಡುಬರುತ್ತಿದೆ. ಮನೆಯನ್ನು ಸೀಲ್ ಮಾಡುತ್ತಿಲ್ಲ. ಕೋವಿಡ್ ಕೇರ್ ಸೆಂಟರ್‍ನಲ್ಲಿ ಹಾಸಿಗೆ ಸಂಖ್ಯೆ ಹೆಚ್ಚಿದೆ. ಆದರೆ, ಸೋಂಕಿತರ ಸಂಖ್ಯೆ ಕಡಿಮೆ ಇದೆ. ಇದಕ್ಕೆ ಕಾರಣವೇನೆಂದು ಪ್ರಶ್ನಿಸಿದರು.

ಆಕ್ಸಿಜನ್ ಬಗ್ಗೆ ಪ್ರಶ್ನಿಸಿದ ಶಾಸಕ ಕೆ.ಜಿ ಬೋಪಯ್ಯ ಅವರಿಗೆ ಉತ್ತರಿಸಿದ ಮೆಡಿಕಲ್ ಕಾಲೇಜು ಡೀನ್ ಡಾ. ಕಾರ್ಯಪ್ಪ, ಜಿಲ್ಲೆಗೆ ಕನಿಷ್ಟ 5 ಕೆ.ಎಲ್. ಲಿಕ್ವಿಡ್ ಆಕ್ಸಿಜನ್ ಸಿಲಿಂಡರ್‍ನ ಅಗತ್ಯವಿದೆ. ನಿತ್ಯ 7 ರಿಂದ 8 ಕೆ.ಎಲ್. ಆಕ್ಸಿಜನ್ ಪೂರೈಕೆಯಾಗುತ್ತಿದೆ. ಅಗತ್ಯವಿರುವಷ್ಟು ಇದೆ. ಇದರೊಂದಿಗೆ 8 ಶುಶ್ರೂಷಕರು, 14 ಲ್ಯಾಬ್ ಟೆಕ್ನಿಷಿಯನ್‍ಗಳು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದರು.

ಈ ಸಂಬಂಧ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಾತನಾಡಿ, ಏಜೆನ್ಸಿ ಮೂಲಕ ಆಕ್ಸಿಜನ್ ತುಂಬಿಸಿಕೊಳ್ಳಲಾಗುತ್ತಿದೆ. 50 ಸಿಲಿಂಡರ್‍ಮೇಲ್ವಿಚಾರಣೆಗೆ ಓರ್ವ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಹೊರಜಿಲ್ಲೆ, ರಾಜ್ಯದಿಂದ ಬಂದವರನ್ನು ಕಡ್ಡಾಯವಾಗಿ ಕ್ವಾರಂಟೈನ್‍ಗೆ ಒಳಪಡಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು. ವೈದ್ಯಕೀಯ ಸಿಬ್ಬಂದಿಗಳನ್ನು ತ್ವರಿತವಾಗಿ ನಿಯೋಜಿಸಿಕೊಳ್ಳುವಂತೆ ಸೂಚನೆ ನೀಡಿದರು.

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಕ್ವಾರಂಟೈನ್‍ನಲ್ಲಿರುವವರ ಓಡಾಟ ಕಂಡುಬಂದಿದೆ. ಸೀಲ್‍ಡೌನ್ ಸರಿಯಾಗಿ ಆಗುತ್ತಿಲ್ಲ. ಇದನ್ನು ಬಿಗಿಗೊಳಿಸಬೇಕು ಎಂದರು. ‘ಶಕ್ತಿ’ಯಲ್ಲಿ ಗಾಳಿಬೀಡು ಕೋವಿಡ್ ಕೇರ್ ಸೆಂಟರ್‍ನಲ್ಲಿ ಊಟ ತಡವಾದ ಬಗ್ಗೆ ಪ್ರಕಟಗೊಂಡ ವರದಿಯನ್ನು ಪ್ರಸ್ತಾಪಿಸಿದರು. ಮುಂದೆ ಈ ರೀತಿ ಸಮಸ್ಯೆಯಾಗದಂತೆ ಎಚ್ಚರ ವಹಿಸುವಂತೆ ಸೂಚಿಸಿದರು. ಸೋಂಕಿತರಿಗೆ ಬಿಸಿ ನೀರು, ಬಿಸಿ ಊಟ ನೀಡಬೇಕು. ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು ಎಂದರು. ಶನಿವಾರಸಂತೆ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಸ್ಪತ್ರೆಯಿಂದ ಓರ್ವ ವೈದ್ಯರನ್ನು ಪ್ರಬಾರವಾಗಿ ನಿಯೋಜನೆ ಮಾಡುವಂತೆ ಸೂಚಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಹಾಜರಿದ್ದರು.