ಸೋಮವಾರಪೇಟೆ : ನವ ಭಾರತ ನಿರ್ಮಾಣ ಕಾರ್ಯಕ್ಕೆ 12ನೇ ಶತಮಾನದ ಮಹಾನ್ ದಾರ್ಶನಿಕ ಬಸವೇಶ್ವರರ ಅನುಭವ ಮಂಟಪವೇ ಬುನಾದಿಯಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಭಿಪ್ರಾಯಿಸಿದರು.
ಬಸವೇಶ್ವರರ 888ನೇ ಜಯಂತಿ ಅಂಗವಾಗಿ ಇಲ್ಲಿನ ಕಕ್ಕೆಹೊಳೆ ಜಂಕ್ಷನ್ನಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಶಾಸಕರು, ತಮ್ಮ ಅನುಭವ ಮಂಟಪದ ಮೂಲಕ ಸಮಾಜದ ಎಲ್ಲಾ ವರ್ಗದವರಿಗೂ ಸಮಾನತೆಯನ್ನು ತಂದುಕೊಟ್ಟ ಬಸವೇಶ್ವರರು ಸಮಾಜದಲ್ಲಿದ್ದ ಮೂಢನಂಬಿಕೆಯನ್ನು ಹೋಗಲಾಡಿಸಲು ಅವಿರತ ಶ್ರಮಿಸಿದರು ಎಂದರು.
ಅಂದಿನ ಅನುಭವ ಮಂಟಪದ ಆದರ್ಶಗಳನ್ನು ಇಟ್ಟುಕೊಂಡೇ ನವ ಭಾರತದ ಸಂವಿಧಾನವನ್ನು ರಚಿಸಲಾಗಿದೆ. ಸರ್ವರೂ ಸಮಾನರು ಎಂಬ ತತ್ವವನ್ನು ಬೋಧಿಸಿದ ಶರಣಶ್ರೇಷ್ಠ ಬಸವೇಶ್ವರರ ತತ್ವಾದರ್ಶಗಳನ್ನು ಎಲ್ಲರೂ ಅಳವಡಿಸಿ ಕೊಳ್ಳಬೇಕು ಎಂದು ಕರೆ ನೀಡಿದರು.
ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಸಾರ್ವಜನಿಕರು ಹೆಚ್ಚಿನ ಜಾಗ್ರತೆ ವಹಿಸಬೇಕು. ಸಾವು ನೋವುಗಳಿಂದ ದೂರವಿರಲು ಸ್ವಯಂ ನಿರ್ಬಂಧ ವಿಧಿಸಿಕೊಳ್ಳಬೇಕು. ಎಲ್ಲರೂ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭ ಉಪಸ್ಥಿತರಿದ್ದ ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠಾಧೀಶರಾದ ಶ್ರೀಸದಾಶಿವ ಸ್ವಾಮೀಜಿ ಮಾತನಾಡಿ, ಬಸವೇಶ್ವರರ ಆದರ್ಶಗಳು ಸಾರ್ವಕಾಲಿಕವಾಗಿದ್ದು, ಸಮಾಜದಲ್ಲಿ ಜಾತೀಯತೆಯನ್ನು ಹೋಗಲಾಡಿಸಲು ಶ್ರಮಿಸಿದ ಮೇರು ವ್ಯಕ್ತಿ ಎಂದು ಬಣ್ಣಿಸಿದರು. ಕಾಯಕವೇ ಕೈಲಾಸ ಎಂಬ ಧ್ಯೇಯವನ್ನು ಬೋಧಿಸಿದ ದಾರ್ಶನಿಕರ ಆದರ್ಶ ಪಾಲನೆ ಇಂದಿನ ಸಮಾಜಕ್ಕೆ ಅಗತ್ಯವಾಗಿದೆ ಎಂದರು.
ಇದೇ ಸಂದರ್ಭ ಸೋಮವಾರಪೇಟೆಯ ಆಂಬ್ಯುಲೆನ್ಸ್ ಚಾಲಕರು, ಸೇವಾ ವಾಹನದ ಚಾಲಕರಿಗೆ ಪ.ಪಂ.ನಿಂದ ಆಹಾರ ಸಾಮಗ್ರಿಗಳ ಕಿಟ್ಗಳನ್ನು ವಿತರಿಸಿ, ಅವರ ಸೇವೆಯನ್ನು ಶ್ಲಾಘಿಸಲಾಯಿತು.
ತಾಲೂಕು ತಹಶೀಲ್ದಾರ್ ಗೋವಿಂದರಾಜು, ಪ.ಪಂ. ಮುಖ್ಯಾಧಿಕಾರಿ ನಾಚಪ್ಪ, ಪೊಲೀಸ್ ವೃತ್ತ ನಿರೀಕ್ಷಕ ಬಿ.ಜಿ. ಮಹೇಶ್, ಠಾಣಾಧಿಕಾರಿ ಶ್ರೀಧರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಮಹೇಶ್, ಪ.ಪಂ. ಉಪಾಧ್ಯಕ್ಷ ಸಂಜೀವ, ನಾಮನಿರ್ದೇಶಿತ ಸದಸ್ಯ ಎಸ್.ಆರ್. ಸೋಮೇಶ್, ಪ್ರಮುಖರಾದ ಮೃತ್ಯುಂಜಯ, ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.