ಚೆಟ್ಟಳ್ಳಿ: ಕೊರೊನಾ ಲಾಕ್ಡೌನ್ ಹಿನ್ನೆಲೆ ಸಹಕಾರ ಸಂಘದಲ್ಲಿ ರೈತರಿಗೆ ಸಾಲ ಮರುಪಾವತಿಸಲಾಗದೆ ಸಂಕಷ್ಟದಲ್ಲಿರುವ ರೈತರ ಸಾಲ ಮರುಪಾವತಿಯ ಅವಧಿಯನ್ನು ವಿಸ್ತರಿಸಲೇಬೇಕೆಂದು ಜನಪರ ಹೋರಾಟ ಸಮಿತಿಯ ಸಂಚಾಲಕ, ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಕೊರೊನಾವನ್ನು ನಿಯಂತ್ರಿಸಲು ಸತತ ಹೋರಾಟ ನಡೆಸುತ್ತಿದೆ. ಸರಕಾರದ ನಿಯಮವನ್ನು ಪಾಲಿಸುವುದು ನಮ್ಮ ಕರ್ತವ್ಯ. ಆದರೆ ಕೊರೊನಾದ ಎರಡನೇ ಅಲೆ ವ್ಯಾಪಕವಾಗಿ ಹರಡಿದ ಹಿನ್ನೆಲೆ ಎಲ್ಲೆಡೆ ಲಾಕ್ಡೌನ್ ಮಾಡಲಾಗಿದ್ದು, ಇದರಿಂದ ದೇಶದ ಬೆನ್ನೆಲುಬು ಎನಿಸಿಕೊಂಡ ರೈತ ತೀರಾ ಸಂಕಷ್ಟಕ್ಕೆ ಸಿಲುಕಿದ್ದಾನೆ. ವರ್ಷದ ಸಾಲ ಮರುಪಾವತಿ ದಿನ ಬಂದಿದ್ದು, ಸರಕಾರ ನಿಗದಿಪಡಿಸಿದ ಶೂನ್ಯ ಬಡ್ಡಿಯ ಬೆಳೆ ಸಾಲ ಪಾವತಿಸಲು ವಾಯಿದೆ ದಿನದ ಒಂದು ದಿನ ಕಳೆದರೂ ಪೂರ್ಣ ಬಡ್ಡಿ ಪಾವತಿಸಬೇಕಿದೆ. ಈ ಸಮಯದಲ್ಲಿ ಬೆಳೆದ ಕಾಫಿ ಹಾಗೂ ಕರಿಮೆಣಸಿಗೆ ಬೆಲೆ ಇಲ್ಲ, ಜೊತೆಗೆ ಖರೀದಿಸುವವರು ಯಾರಿಲ್ಲ. ರೈತನಿಗೆ ಸಾಲ ಮರುಪಾವತಿಸಲು ಹಣವಿಲ್ಲ, ಆರ್ಟಿಸಿ ದೊರೆಯುತ್ತಿಲ್ಲ, ಸಹಕಾರ ಸಂಘಕ್ಕೆ ಬರಲು ಸಾಧ್ಯವಾಗದ ಪರಿಸ್ಥಿತಿ ಇದೆ. ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳು ಕಳೆದ ಬಾರಿಯಂತೆ ಸಾಲ ಮರುಪಾವತಿಸುವ ಅವಧಿಯನ್ನು ವಿಸ್ತರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಒತ್ತಾಯ ಹೇರಬೇಕೆಂದರು. ಚೆಟ್ಟಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಮೂರು ಸಿಬ್ಬಂದಿಗಳಿಗೆ ಕೊರೊನಾ ಬಂದು ಕೆಲಸ ಮಾಡಲು ಸಿಬ್ಬಂದಿ ಕೊರತೆ ಎದುರಾಗಿದೆ. ಎಲ್ಲರೂ ಸಹಕಾರ ಸಂಘದ ಉಳಿವಿಗಾಗಿ ಸಹಕರಿಸಬೇಕಿದೆ ಎಂದು ಮನವಿ ಮಾಡಿದ್ದಾರೆ.