ಕೂಡಿಗೆ : ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ 12ಕ್ಕೂ ಹೆಚ್ಚು ಸಹಕಾರ ಕೃಷಿ ಪತ್ತಿನ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಈ ವ್ಯಾಪ್ತಿಯ ಸಾವಿರಾರು ರೈತರು ತಮ್ಮ ಸಹಕಾರ ಸಂಘಗಳ ಮೂಲಕ ರಾಜ್ಯ ಸರ್ಕಾರ ನೀಡುವ ಕೃಷಿ ಸಾಲವನ್ನು ಜಮೀನಿನ ಆಧಾರದ ಮೇಲೆ ಪಡೆದುಕೊಂಡಿದ್ದಾರೆ. ಆದರೆ ಕೊರೊನಾ ಮಾಹಾಮಾರಿ ಎಲ್ಲೆಡೆ ಹರಡುವುದರ ಜೊತೆಗೆ ಕೆಲವು ಸಹಕಾರ ಸಂಘಗಳ ಸಿಬ್ಬಂದಿಗಳಿಗೆ ಸೋಂಕು ತಗುಲಿ ಆಯಾ ವ್ಯಾಪ್ತಿಯ ಸಹಕಾರ ಸಂಘಗಳ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ.
ರೈತರು ಆಯಾ ಸಹಕಾರ ಸಂಘಗಳಲ್ಲಿ ವರ್ಷದ ಅಂತ್ಯದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಹಕಾರ ಸಂಘದಿಂದ ತೆಗೆದುಕೊಂಡು ಬೆಳೆ ಸಾಲವನ್ನು ಮರು ಪಾವತಿಸುವ ಕೊನೆಯ ತಿಂಗಳಾಗಿದೆ. ಇಂತಹ ಕೋವಿಡ್ ಸಂದರ್ಭಗಳಲ್ಲಿ ಸಹಕಾರ ಸಂಘಗಳಿಗೆ ರೈತರು ಬಂದು ಬೆಳೆ ಸಾಲದ ಹಣವನ್ನು ಕಟ್ಟಿ ನಂತರ ಮುಂದಿನ ಬೇಸಾಯ ಮರು ಸಾಲವನ್ನು ಪಡೆಯಲು ಅರ್ಜಿಗಳನ್ನು ಸಲ್ಲಿಸುವ ಸಮಯವಾಗಿರುತ್ತದೆ.
ಸಂಘದಿಂದ ಪಡೆದ ಬೆಳೆ ಸಾಲವನ್ನು ಕಟ್ಟಲು ಕೊರೊನಾ ಸೋಂಕು ಮತ್ತು ಲಾಕ್ ಡೌನ್ ಹಿನ್ನೆಲೆಯಲ್ಲಿ ಬರಲು ರೈತರಿಗೆ ಸಾದ್ಯವಾಗುತ್ತಿಲ್ಲ. ಏಪ್ರಿಲ್ ಮತ್ತು ಮೇ ತಿಂಗಳ ಕೃಷಿ ಸಾಲದ ಮರು ಪಾವತಿ ಅವಧಿಯನ್ನು ವಿಸ್ತರಣೆ ಮಾಡಬೇಕೆಂದು ಸಹಕಾರ ಸಂಘಗಳಿಂದ ಕೃಷಿ ಸಾಲ ಪಡೆದ ಸಂಘದ ಸರ್ವ ರೈತ ಸದಸ್ಯರುಗಳ ಆಗ್ರಹವಾಗಿದೆ.
ಸರಕಾರದ ಭರವಸೆ : ಈ ವಿಷಯವಾಗಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಅಭಿಪ್ರಾಯ ಬಯಸಿದಾಗ, ಈಗಾಗಲೇ ಕೆಲ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ ಸೋಂಕು ತಗುಲಿ ಸ್ಥಗಿತಗೊಂಡಿರುವುದು ಗಮನಕ್ಕೆ ಬಂದಿದೆ. ಅದರನ್ವಯ ರೈತರಿಗೆ ಅನುಕೂಲವಾಗುವಂತೆ ಮತ್ತು ರೋಗವನ್ನು ತಡೆಗಟ್ಟಲು ಅನುಕೂಲವಾಗುವಂತೆ ರೈತರು ಒಂದೆಡೆ ಸೇರಿ ಕೃಷಿ ಸಾಲವನ್ನು ಕಟ್ಟಿ ಮರುಸಾಲ ಪಡೆದು ಬೇಸಾಯ ಮಾಡಲು ಮುಂದಾಗುತ್ತಿರುವುದು ತಿಳಿದುಬಂದಿದೆ. ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳ ಕಾರ್ಯದರ್ಶಿ ಮತ್ತು ರಾಜ್ಯ ಸಹಕಾರ ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ. ಕೃಷಿ ಸಾಲ ಮರು ಪಾವತಿಯ ಅವಧಿಯ ವಿಸ್ತರಣೆಗೆ ಕಾಲಾವಕಾಶ ಸಿಗಬಹುದೆಂಬ ಭರವಸೆ ನೀಡಿರುತ್ತಾರೆ ಎಂದು ತಿಳಿಸಿದ್ದಾರೆ.
-ಪಿ.ವಿ.ಪ್ರಭಾಕರ್, ಕರುಣ್, ಕೆ.ಕೆ. ನಾಗರಾಜಶೆಟ್ಟಿ.