ಸೋಮವಾರಪೇಟೆ,ಮೇ.10: ಸಂಬಂಧಿಕರ ಸಾವಿಗೆ ತೆರಳುತ್ತಿದ್ದ ವ್ಯಕ್ತಿಯೋರ್ವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಯಡವನಾಡು ಗ್ರಾಮದಲ್ಲಿ ನಡೆದಿದೆ.
ಯಡವಾರೆ ಗ್ರಾಮದ ನಾರೂರು ಮನೆ ಈರಪ್ಪ(65) ಮೃತಪಟ್ಟ ದುರ್ದೈವಿ. ಯಡವನಾಡು ಗ್ರಾಮದಲ್ಲಿ ಸಂಬಂಧಿಕರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ, ಶವಸಂಸ್ಕಾರದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಸಂದರ್ಭ ಘಟನೆ ನಡೆದಿದೆ.
ಯಡವನಾಡು ಗ್ರಾಮದ ರಸ್ತೆಯಲ್ಲಿ ಮುಂಭಾಗದಿಂದ ಬರುತ್ತಿದ್ದ ವಾಹನಕ್ಕೆ ದಾರಿ ಬಿಡುವ ಸಂದರ್ಭ ಆಕಸ್ಮಿಕವಾಗಿ ಬೈಕ್ ಚರಂಡಿಗೆ ಬಿದ್ದ ಪರಿಣಾಮ ತಲೆ ಭಾಗಕ್ಕೆ ತೀವ್ರ ಗಾಯವಾಗಿದೆ. ಗಾಯಾಳುವನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭ ದಾರಿಮಧ್ಯೆ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.