ನಗರದ ಪ್ರಮುಖ ರಸ್ತೆಗಳಲ್ಲಿ ಹೂವುಗಳನ್ನಿಟ್ಟುಕೊಂಡು ಮಾರಾಟಕ್ಕೆ ಅಣಿಯಾಗುತ್ತೇವೆ. ಯಾರೊಬ್ಬರೂ ಖರೀದಿಗೆ ಬರಲ್ಲ, ದೇವಸ್ಥಾನಕ್ಕೆ, ಮದುವೆ ಇತರ ಸಮಾರಂಭಗಳಿಗೆ ತೆರಳುವವರಿದ್ದರೆ ವ್ಯಾಪಾರವಾಗುತ್ತೆ. ಈ ಸರಕಾರ ದೇವಸ್ಥಾನಕ್ಕೆ ಬಾಗಿಲು ಹಾಕಿಸಿ ವೈನ್ ಶಾಪ್‍ಗಳನ್ನು ತೆರೆದಿಟ್ಟಿದೆ. ಹೂವು ತಗೊಂಡೊಗಿ ವೈನ್ ಶಾಪಲ್ಲಿಡಕ್ಕಾಗುತ್ತಾ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದರು. ಬೀದಿಬದಿ ವ್ಯಾಪಾರಿಗಳಿಗೆ ದಿನದ ಆದಾಯವೇ ಆಧಾರ. ವ್ಯಾಪಾರ ಮಾಡಿದರಷ್ಟೇ ಮೂರು ಹೊತ್ತಿನ ಊಟ. ಈಗಿನ ಪರಿಸ್ಥಿತಿ ಯಲ್ಲಿ ಅಂಗಡಿಗೆ ಒಬ್ಬರು ಗ್ರಾಹಕರು ಬಂದರೂ ಸಾಕು ಎನ್ನುವಂತಾಗಿದೆ. ಕೊರೊನಾ ಸೋಂಕು ಭೀತಿಯಿಂದ ಜನರು ಖರೀದಿಯಿಂದ ದೂರವೇ ಉಳಿದಿದ್ದಾರೆ. ವ್ಯಾಪಾರವಿಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ಬಳೆ ವ್ಯಾಪಾರಿ ಅಳಲು ತೋಡಿಕೊಂಡರು. ಮೊದಲು ಖರ್ಚು ಕಳೆದು ದಿನಕ್ಕೆ 500 ರಿಂದ 800 ಕೈ ಸೇರುತ್ತಿತ್ತು. ಈಗ 100 ರೂ. ವ್ಯಾಪಾರ ನಡೆದರೆ ಅದೇ ಹೆಚ್ಚು. ಈಗ ಅದಕ್ಕೂ ಕುತ್ತು ಬಂದಿದೆ. ಸಾಲ ಮಾಡಿ ಸಂಸಾರ ಸಾಗಿಸುವ ಪರಿಸ್ಥಿತಿ ಇದೆ. ಬೀದಿ ಬದಿ ವ್ಯಾಪಾರಿಗಳ ಬದುಕು ಬೀದಿಗೆ ಬಿದ್ದಿದೆ ಎಂದು ಪಾನಿಪುರಿ ವ್ಯಾಪಾರಿಯೊಬ್ಬರು ತಮ್ಮ ಅಳಲು ತೋಡಿಕೊಂಡರು. ದಿನನಿತ್ಯದ ಬಳಕೆ ವಸ್ತುಗಳನ್ನು ಖರೀದಿಸಲು ಸಹ ಹಿಂದೆ ಮುಂದೆ ನೋಡುವ ಸ್ಥಿತಿ ವ್ಯಾಪಾರಿಗಳದ್ದಾಗಿದೆ. ಈಗಲಾದರೂ ಸರಕಾರ ಎಚ್ಚೆತ್ತು ಬೀದಿ ಬದಿ ವ್ಯಾಪಾರಿಗಳ ಸಹಾಯಕ್ಕೆ ಬರಬೇಕಿದೆ. ಕಳೆದ ವರ್ಷ ಲಾಕ್‍ಡೌನ್ ಆದಾಗಿನಿಂದಲೂ ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ಕಿಟ್ ಕೂಡ ಲಭಿಸಿಲ್ಲ. ಅವರೆಲ್ಲ ತುಂಬಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

-ಎಸ್.ಕೆ. ಯತಿರಾಜ್, ಬೀದಿ ಬದಿ ವ್ಯಾಪಾರಿಗಳ ರಾಜ್ಯ ಸಂಘದ ನಿರ್ದೆಶಕರು ಹಾಗೂ ವೀರಾಜಪೇಟೆ ಸಂಘದ ಅಧ್ಯಕ್ಷ

-ಕೆ. ನಮನ