ಕೊರೊನಾ ಎರಡನೇ ಅಲೆಯನ್ನು ತಡೆಗಟ್ಟಲು ಜಿಲ್ಲಾಡಳಿತ ಕೈಗೊಂಡ ಕ್ರಮದ ಬಗ್ಗೆ ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಅಸಮಾಧಾನ ವ್ಯಕ್ತಗೊಂಡಿತು. ಕೊರೊನಾದಿಂದ ಕೆಲಸ ಕಾರ್ಯವಿಲ್ಲದೆ ಸಿಗುವ ಪಡಿತರ ಪಡೆದುಕೊಂಡು ನೆಮ್ಮದಿಯಿಂದ ತೆರಳಲು ಕೂಡ ಸಾಧ್ಯವಾಗದ ಪರಿಸ್ಥಿತಿ ತಂದಿದ್ದಾರೆ ಎಂದು ವಯೋವೃದ್ಧ ಮಹಿಳೆ ತಮ್ಮ ನೋವನ್ನು ತೋಡಿಕೊಂಡರು.

ಕೇವಲ ಟ್ರಾಫಿಕ್ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡ ಇಲಾಖೆ ಅವುಗಳನ್ನು ನಿಯಂತ್ರಣ ಮಾಡುವ ಬದಲು ತಮಗೆ ಬೇಕಾದ ರೀತಿಯಲ್ಲಿ ವಾಹನಗಳನ್ನು ತಡೆದ ಪರಿಣಾಮ ನಾಗರಿಕರು, ವಯೋವೃದ್ಧರು ತೊಂದರೆ ಅನುಭವಿಸಿದರು. ನಗರಕ್ಕೆ ಬರುವ ವಾಹನಗಳನ್ನು ಕಿ.ಮೀ. ಹಿಂದೆಯೇ ಪೆÇಲೀಸರು ತಡೆದ ಪರಿಣಾಮ ಅಗತ್ಯ ವಸ್ತುಗಳನ್ನು ಪಡೆಯಲು ಆಗಮಿಸಿದ ಜನರಿಗೆ ಉರಿ ಬಿಸಿಲಿನಲ್ಲಿ ಕೀ.ಮೀ. ದೂರದವರೆಗೆ ನಡೆದು ಸಾಮಗ್ರಿಗಳನ್ನು ತಲೆಯ ಮೇಲೆ ಹೊತ್ತುಕೊಂಡು ವಾಪಾಸು ತೆರಳಿದರು. ಜಿಲ್ಲಾಡಳಿತದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಳಿಗ್ಗೆಯಿಂದ ಕುಡಿಯಲು ನೀರೂ ಇಲ್ಲದೆ ಜನರನ್ನು ಸಮಾಧಾನಪಡಿಸುವಲ್ಲಿ ಕರ್ತವ್ಯದಲ್ಲಿದ್ದ ಪೆÇಲೀಸರು ಸುಸ್ತಾದರು. ಪಾಲಿಬೆಟ್ಟ, ಆರ್.ಎಂ.ಸಿ. ಅರುವತೊಕ್ಕಲು, ಪೆÇನ್ನಂಪೇಟೆ ಜಂಕ್ಷನ್ ಬಳಿಯಲ್ಲಿ ಪೆÇಲೀಸರು ಬ್ಯಾರಿಕೇಡ್ ಇಟ್ಟು ವಾಹನಗಳು ನಗರಕ್ಕೆ ಪ್ರವೇಶಿಸದಂತೆ ಅಲ್ಲಿಯೇ ತಡೆದರು. ಇದರಿಂದಾಗಿ ಜನರು ತೊಂದರೆ ಅನುಭವಿಸಿದರು.

ಪಡಿತರಕ್ಕೆ ಸಾಲು.. ಸಾಲು..

ಅರ್ಹರಿಗೆ ಸಿಗುವ ಪಡಿತರ ಅಕ್ಕಿ, ಗೋಧಿ ಪಡೆಯಲು ಗೋಣಿಕೊಪ್ಪ ನಗರದ ಎ.ಪಿ.ಸಿ.ಎಂ.ಎಸ್. ನ್ಯಾಯಬೆಲೆ ಅಂಗಡಿಯ ಮುಂದೆ ಪಡಿತರದಾರರು ಮುಂಜಾನೆಯ 6 ಗಂಟೆಗೆ ಬಂದು ಸರತಿ ಸಾಲಿನಲ್ಲಿ ನಿಂತಿದ್ದರು. ಎಷ್ಟು ಹೇಳಿದರೂ ಜನರು ಮುಗಿಬಿದ್ದು ಅಕ್ಕಿ ಖರೀದಿಸಿದರು.

ಆಟೋ ರಿಕ್ಷಾಗಳು ಇಲ್ಲದ ಕಾರಣ ಅಕ್ಕಿ ಮೂಟೆಗಳನ್ನು ತಲೆಯ ಮೇಲೆ ಹೊತ್ತು ಕೀ.ಮೀ. ದೂರದವರೆಗೆ ನಡೆದುಕೊಂಡೆ ಸಾಗಿದರು. ದ್ವಿಚಕ್ರ ವಾಹನಗಳಿಗೂ ಕೂಡ ಪೆÇಲೀಸರು ನಗರದಲ್ಲಿ ಓಡಾಡಲು ಅವಕಾಶ ನೀಡಲಿಲ್ಲ. ಮಾಂಸ, ಮೀನು, ತರಕಾರಿ, ಮೆಡಿಕಲ್, ದಿನಸಿ ಅಂಗಡಿಗಳಲ್ಲಿ ಜನರ ಸರತಿ ಸಾಲು ಕಂಡುಬಂದವು.

ಪೆÇಲೀಸರು ತಮ್ಮ ವಾಹನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕರೆ ನೀಡಿದರು. ತಾಲೂಕು ತಹಶೀಲ್ದಾರ್ ಕಾವ್ಯರಾಣಿ ಹಾಗೂ ಸಿಬ್ಬಂದಿ ಆಗಮಿಸಿ ವ್ಯವಸ್ಥೆ ಪರಿಶೀಲನೆ ನಡೆಸಿದರು. ಡಿವೈಎಸ್ಪಿ ಜಯಕುಮಾರ್ ನಗರದ ವ್ಯವಸ್ಥೆ ಪರಿಶೀಲನೆ ನಡೆಸಿದರು.