ವೀರಾಜಪೇಟೆ ನಗರದೊಳಕ್ಕೆ ಸಾರ್ವಜನಿಕರ ವಾಹನಗಳಿಗೆ ಪ್ರವೇಶ ನಿಷೇಧ ಮಾಡಿ ಪೆರಂಬಾಡಿ, ಬಿಟ್ಟಂಗಾಲ, ಕೊಮ್ಮೆತೋಡು, ಕದನೂರು, ಮೀನುಪೇಟೆ, ಪಂಜರಪೇಟೆ, ದಖ್ಖನಿ ಮೊಹಲ್ಲಾ ಈ ಕಡೆಗಳಿಂದೆಲ್ಲಾ ನಗರ ಪ್ರವೇಶಿಸುವ ವಾಹನಗಳಿಗೆ ಆಯ್ದ ಸ್ಥಳಗಳಲ್ಲಿ ಪಾಕಿರ್ಂಗ್ ವ್ಯವಸ್ಥೆ ಮಾಡಲಾಗಿತ್ತು. ವೀರಾಜಪೇಟೆ ನಗರದೊಳಕ್ಕೆ ಯಾವುದೇ ವಾಹನಗಳನ್ನು ಬಿಡಲಿಲ್ಲ. ನಾಗರಿಕರು ಇಡೀ ವೀರಾಜಪೇಟೆಯನ್ನು ಕಾಲ್ನಡಿಗೆಯಲ್ಲಿ ಸುತ್ತಿ ಅಗತ್ಯ ವಸ್ತು ಖರೀದಿ ಮಾಡಬೇಕಾಯಿತು.
ಇದೇ ದಿನ ಪಡಿತರ ಕೂಡಾ ನೀಡುವುದು ಇದ್ದುದರಿಂದ ಸಾರ್ವಜನಿಕರು ಪಡಿತರ ಚೀಲಗಳನ್ನು ಹೆಗಲ ಮೇಲೆ, ಬೆನ್ನಿನ ಮೇಲೆ ಹೊತ್ತು ಸಾಗುತ್ತಿದ್ದ ದೃಶ್ಯಗಳು ಕಂಡುಬಂದವು.
ನಗರದಲ್ಲಿ ವಾಹನ ಸಂಚಾರ ಇರಲೇ ಇಲ್ಲ, ಅದರ ಜೊತೆಗೆ ಜನದಟ್ಟಣೆಯೂ ವಿರಳವಾಗಿತ್ತು. ಮಲೆತಿರಿಕೆ ಬೆಟ್ಟದಿಂದ ಹಾಗೂ ಗ್ರಾಮಾಂತರ ಪ್ರದೇಶದಿಂದ ಬಂದಿದ್ದ ಜನತೆ ತೂಕದ ಬ್ಯಾಗುಗಳನ್ನು ಹಿಡಿದುಕೊಂಡು ವಾಹನಗಳಿಲ್ಲದೆ ಪರದಾಡಬೇಕಾಯಿತು.
ಇತ್ತ ಪಟ್ಟಣ ಪಂಚಾಯಿತಿಯಿಂದ ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಲಕ್ಕಿಡಿಪ್ ಮೂಲಕ ಅನುಮತಿ ಪಡೆದು ಇಟ್ಟುಕೊಂಡಿರುವ ತರಕಾರಿ ಅಂಗಡಿಗಳು ಗ್ರಾಹಕರಿಲ್ಲದೆ ಖಾಲಿ ಹೊಡೆಯುತ್ತಿದ್ದವು.
ಜನತೆ ತರಕಾರಿ, ಅಕ್ಕಿ ಚೀಲ ಹೊತ್ತು, ನಗರದ ರಸ್ತೆಗಳಲ್ಲಿ ಅಲೆದಲೆದು ಸುಸ್ತಾಗಿ ಜಿಲ್ಲಾಡಳಿತದ ನೂತನ ಕ್ರಮದ ಬಗ್ಗೆ ಅಸಮಾಧಾನ ಹೊರಹಾಕಿದರು.