ನಾಪೆÇೀಕ್ಲು, ಮೇ 10: ಬೆಲೆ ಕೊರತೆ, ಕಾರ್ಮಿಕರ ಸಮಸ್ಯೆ, ಏರಿದ ರಸಗೊಬ್ಬರ ದರ, ಪ್ರಕೃತಿ ವಿಕೋಪದಿಂದ ಕಂಗೆಟ್ಟಿದ್ದ ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರಿಗೆ, ಕೊರೊನಾ ಮಹಾಮಾರಿ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ಸಾಲ, ಮರುಪಾವತಿ ಎಂದು ಅಲ್ಲಿಂದ ಇಲ್ಲಿಗೆ ತೇಪೆ ಹಾಕಿ ಜೀವನ ನಡೆಸುತ್ತಿದ್ದ ಬೆಳೆಗಾರರಿಗೆ ಬಿರುಗಾಳಿಯಂತೆ ಅಪ್ಪಳಿಸಿದ ಕೊರೊನಾ ಎರಡನೇ ಅಲೆ ಅವರ ನಿದ್ದೆಗೆಡಿಸಿದೆ. ಒಂದೆಡೆ ಲಾಕ್‍ಡೌನ್, ಮತ್ತೊಂದೆಡೆ ಸಾಲ ಮರುಪಾವತಿಗೆ ಕೊನೆ ದಿನ. ಇದರಿಂದ ಬೆಳೆಗಾರರು ಹೆಚ್ಚಿನ ಸಂಕಷ್ಟ ಎದುರಿಸುತ್ತಿದ್ದಾರೆ. ಆದುದರಿಂದ ಸಾಲ ಮರುಪಾವತಿ ಅವಧಿಯನ್ನು ಕೊರೊನಾ ನಿಯಂತ್ರಣ ಬರುವವರೆಗೆ ಮುಂದೂಡಲು ಜಿಲ್ಲೆಯ ಶಾಸಕರು, ಜನ ಪ್ರತಿನಿಧಿಗಳು ಸರಕಾರದೊಂದಿಗೆ ವ್ಯವಹರಿಸಬೇಕು ಎಂದು ಜಿಲ್ಲೆಯ ನೊಂದ ಬೆಳೆಗಾರರ ಪರವಾಗಿ ಕಾಫಿ ಬೆಳೆಗಾರ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಬಿದ್ದಾಟಂಡ ಜಿನ್ನು ನಾಣಯ್ಯ, ಪಟ್ರಪಂಡ ಮೋಹನ್ ಮುದ್ದಪ್ಪ, ಕೇಟೋಳಿರ ರೆಮ್ಮಿ, ನೆಡುಮಂಡ ಕೃತಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಯ ಮೂಲಕ ಮನವಿ ಮಾಡಿದ ಅವರು ಲಾಕ್‍ಡೌನ್ ಹಿನೆÀ್ನಲೆಯಲ್ಲಿ ಕಾಫಿ, ಕಾಳುಮೆಣಸು ಬೆಲೆ ಕುಸಿದಿದೆ. ಆದರೂ ಪರವಾಗಿಲ್ಲ. ಮಾರಾಟ ಮಾಡಿ ಸಾಲ ಮರುಪಾವತಿ ಮಾಡುವ ಎಂದರೆ ಕಾಫಿ ಖರೀದಿಸುವವರು ಇಲ್ಲ. ವಾಹನ ರಸ್ತೆಗಿಳಿಯುವ ಹಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಅವರು ಸಾಲ ಮರುಪಾವತಿ ಅವಧಿ ಮುಕ್ತಾಯಗೊಂಡರೆ ಶೇ. 13ರಷ್ಟು ಬಡ್ಡಿ ಕಟ್ಟಬೇಕಾಗುತ್ತದೆ. ಸಾಲ ಮರು ಪಾವತಿಗೆ ಆರ್.ಟಿ.ಸಿ, ಜೆರಾಕ್ಸ್ ಮತ್ತಿತರ ದಾಖಲಾತಿ ನೀಡಬೇಕಾಗುತ್ತದೆ. ಲಾಕ್ ಡೌನ್ ಇರುವ ಕಾರಣ ದಾಖಲಾತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಸಾಲ ಪಡೆದಿರುವ ಹಲವರು ಕೊರೊನಾ ಪಾಸಿಟಿವ್ ಕಾರಣದಿಂದ ಅಸ್ಪತ್ರೆಯಲ್ಲಿ, ಹೋಂ ಕ್ವಾರಂಟೈನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಹೇಗೆ ಸಾಲ ಮರುಪಾವತಿ ಮಾಡುವದು ಎಂದರು. ಬೆಳೆಗಾರರ ಸಾಲ ಮನ್ನಾ. ಸಾಲ ಮರುಪಾವತಿ ಅವಧಿ ವಿಸ್ತರಿಸುವದರ ಮೂಲಕ ಈ ಸಂಕಷ್ಟದಿಂದ ಬೆಳೆಗಾರರನ್ನು ಜನಪ್ರತಿನಿಧಿಗಳು ಕಾಪಾಡಬೇಕೆಂದು ಅವರು ವಿನಂತಿಸಿಕೊಂಡಿದ್ದಾರೆ.