ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ಐಸಿಯು ಘಟವೇ ಸದ್ಯಕ್ಕೆ ತೀವ್ರ ನಿಗಾ ಘಟಕದಲ್ಲಿದೆ! ಐಸಿಯುನಲ್ಲಿ 3 ಬೆಡ್‍ಗಳಿದ್ದರೂ ಯಾವುದೇ ರೋಗಿಗೆ ಇಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ. ಏಕೆಂದರೆ ಇಲ್ಲಿಗೆ ಅತೀ ಅಗತ್ಯವಾಗಿ ಬೇಕಾಗಿರುವ ಫಿಜಿಷಿಯನ್ ಮತ್ತು ಅನಸ್ತೇಷಿಯಾ ಸ್ಪೆಷಲಿಸ್ಟ್ ಇಲ್ಲ. ಪರಿಣಾಮ 3 ಬೆಡ್‍ಗಳ ಐಸಿಯು ಘಟಕ ನಾಮ್‍ಕೇವಾಸ್ತೆಯಂತಾಗಿದೆ. ಬೃಹತ್ ಕಟ್ಟಡವನ್ನು ಹೊಂದಿರುವ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿ ಮಾಡುವ ಎಲ್ಲಾ ಅವಕಾಶವಿದ್ದರೂ ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳು ಕಾರ್ಯೋನ್ಮುಖರಾಗುತ್ತಿಲ್ಲ. ತಕ್ಷಣವೇ ಸೋಮವಾರಪೇಟೆ ಆಸ್ಪತ್ರೆಗೆ ಫಿಜಿಷಿಯನ್ ಮತ್ತು ಅನಸ್ತೇಷಿಯಾ ಸ್ಪೆಷಲಿಸ್ಟ್‍ನ್ನು ನೇಮಕ ಮಾಡಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ತಾ.ಪಂ. ಮಾಜೀ ಅಧ್ಯಕ್ಷ, ಶಾಂತಳ್ಳಿ ಕುಮಾರಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಂ. ಲೋಕೇಶ್ ಆಗ್ರಹಿಸಿದ್ದಾರೆ.