ಅಧಿಕಾರಿಗಳು ಗಮನಹರಿಸುವಂತೆ ಸ್ಥಳೀಯರ ಆಗ್ರಹ

ಮಡಿಕೇರಿ, ಮೇ 9: ಇತ್ತೀಚೆಗಷ್ಟೇ ಕಾಂಕ್ರೀಟಿಕರಣಗೊಂಡಿರುವ ಮಡಿಕೇರಿಯಿಂದ-ಮೇಕೇರಿ ಸಂಪರ್ಕ ಕಲ್ಪಿಸುವ ಮಡಿಕೇರಿ ಟೋಲ್‍ಗೇಟ್‍ನಿಂದ ಸುಮಾರು 4 ಕಿ.ಮೀ.ತನಕ ರಾಜ್ಯ ಹೆದ್ದಾರಿ ಸಂಚಾರಕ್ಕೆ ಯೋಗ್ಯವಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

2018 ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಭಾರೀ ಮಳೆ ಸುರಿದ ಪರಿಣಾಮ ಈ ತಿರುವು ರಸ್ತೆಯಲ್ಲಿ ಗುಡ್ಡ ಕುಸಿದು ಕೆಲವು ಭಾಗದಲ್ಲಿ ರಸ್ತೆಗೂ ಹಾನಿಯಾಗಿತ್ತು. ಈ ಹಿನ್ನೆಲೆ ಹಾನಿಗೀಡಾದ ರಸ್ತೆಯ ಆಯ್ದ ಭಾಗಗಳಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಕಾಂಕ್ರೀಟೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು.

ಮೊದಲ ಹಂತವಾಗಿ 2020 ರ ಆಗಸ್ಟ್ 30 ರಿಂದ 2020 ರ ಅಕ್ಟೋಬರ್ 30 ರವರೆಗೆ ರಸ್ತೆ ಸಂಚಾರವನ್ನು ಸಂಪೂರ್ಣ ಬಂದ್ ಮಾಡಿ 2 ತಿಂಗಳ ಕಾಲ ಕಾಮಗಾರಿ ನಡೆಸಲಾಗಿತ್ತು. ತದನಂತರ ಬಾಕಿ ಉಳಿದಿದ್ದ ಕಾಮಗಾರಿ ನಡೆಸುವ ಸಲುವಾಗಿ ಎರಡನೇ ಹಂತವಾಗಿ 2021ರ ಫೆಬ್ರವರಿ 25 ರಿಂದ ಮಾರ್ಚ್ 25ರ ವರಗೆ ಒಂದು ತಿಂಗಳ ಕಾಲ ಸಂಪೂರ್ಣ ರಸ್ತೆ ಬಂದ್ ಮಾಡಿ ಕಾಮಗಾರಿ ನಡೆಸಲಾಗಿತ್ತು. ಸಾರ್ವಜನಿಕರಿಗೆ ಬದಲಿ ರಸ್ತೆಯಾಗಿ ಮೇಕೇರಿ-ತಾಳತ್‍ಮನೆ ಮೂಲಕ ಮಡಿಕೇರಿಗೆ ತೆರಳಲು ಅನುವು ಮಾಡಿಕೊಡಲಾಗಿತ್ತು.

ಎರಡು ಹಂತದಲ್ಲಿ ಸುಮಾರು 3 ತಿಂಗಳ ಕಾಲ ಪ್ರಮುಖ ರಸ್ತೆಯನ್ನು ಬಂದ್ ಮಾಡಿ ಕಾಂಕ್ರೀಟಿಕರಣಗೊಳಿಸಿದ ಲೋಕೋಪಯೋಗಿ ಇಲಾಖೆ, ಕಾಮಗಾರಿ ಆದ ಬಳಿಕ ಇತ್ತ ಕಡೆ ಗಮನ ಹರಿಸಿದಂತಿಲ್ಲ.

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಗೆ

ನೂತನವಾಗಿ ಕಾಂಕ್ರೀಟಿಕರಣಗೊಂಡ ರಸ್ತೆ ಕಚ್ಚಾ ಮಣ್ಣು ರಸ್ತೆಯಾಗಿ ಪರಿವರ್ತನೆ ಗೊಂಡಿದೆ. ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸದೇ ಅವೈಜ್ಞಾನಿಕವಾಗಿ ಕಾಮಗಾರಿ ನಡೆದಿದ್ದು, ಮಳೆ ನೀರು ಸರಾಗವಾಗಿ ಹರಿಯದೇ ಕೊಚ್ಚೆ ಮಣ್ಣು ರಸ್ತೆಯಲ್ಲಿ ಹರಿದು ಬಂದು ರಸ್ತೆ ತುಂಬಾ ಕೆಸರು ನಿಂತಿದೆ.

ಕೆಲವೆಡೆ ಮಾತ್ರ ಚರಂಡಿ ನಿರ್ಮಿಸಿದ್ದು, ಮಳೆ ನೀರಿನ ರಭಸಕ್ಕೆ ಚರಂಡಿ ತುಂಬಾ ಮಣ್ಣು ನಿಂತು ರಸ್ತೆ ಮೇಲೆ ಮಣ್ಣಿನ ರಾಶಿ ನಿಂತಿದೆ. ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ಈ ರಸ್ತೆಯಲ್ಲಿ ಸಂಚರಿಸಲು ಕಷ್ಟವಾಗಿದ್ದು, ಮಳೆಯಿಂದ ಹರಿದು ಬಂದ ಮರಳು ರಸ್ತೆಯ ತಿರುವಿನಲ್ಲಿ ವಾಹನವನ್ನು ಚಾಲಿಸುವಾಗ ಒಂದು ಬದಿಗೆ ಸರಿಸಿ ಅಪಾಯ ತಂದೊಡ್ಡುವ ಸಾಧ್ಯತೆ ಇದೆ.

ಒಂದೆರಡು ದಿನ ಬಿಸಿಲು ಬಂದರೆ ಸಾಕು ರಸ್ತೆಯ ಮೇಲಿನ ಮಣ್ಣು ಧೂಳಾಗಿ ಪರಿವರ್ತನೆಗೊಂಡು ವಾಹನ ಸವಾರರಿಗೆ ಅನಾನುಕೂಲ ಉಂಟಾಗಿ ಅಲರ್ಜಿ ಮುಂತಾದ ಆರೋಗ್ಯ ಸಮಸ್ಯೆ ಉಂಟಾಗಬಹುದು. ರಸ್ತೆ ಬದಿಗೆ ಮಾರ್ಕಿಂಗ್ ಮಾಡಿದ್ದು ರಸ್ತೆ ಮೇಲೆ ಮಣ್ಣು ನಿಂತ ಪರಿಣಾಮ ರಸ್ತೆ ಬದಿಯ ಮಾರ್ಕ್ ಮರೆಯಾಗಿ ರಸ್ತೆಯನ್ನು ಹುಡುಕಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ಸುಮಾರು 3 ತಿಂಗಳ ಕಾಲ ಸಾರ್ವಜನಿಕ ರಸ್ತೆ ಬಂದ್ ಮಾಡಿ ನಡೆಸಿರುವ ಈ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಕೂಡಲೇ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸೂಕ್ತ ಚರಂಡಿ ನಿರ್ಮಿಸಿ, ಮಳೆ ನೀರು ಸರಾಗವಾಗಿ ಚರಂಡಿ ಮೂಲಕ ಹರಿಯುವಂತೆ ಮಾಡಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.