ಸೋಮವಾರಪೇಟೆ, ಮೇ. ೮: ಸಿಡಿಲು ಬಡಿದು ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡಿರುವ ಘಟನೆ ಸಮೀಪದ ಶಾಂತಳ್ಳಿ ಗ್ರಾಮದಲ್ಲಿ ನಡೆದಿದೆ.

ಶಾಂತಳ್ಳಿಯ ಮಾಳಗದ್ದೆ ನಿವಾಸಿ ಧರ್ಮಪ್ಪ ಎಂಬವರೇ ಸಿಡಿಲಾಘಾತಕ್ಕೆ ಸಿಲುಕಿ ಗಾಯಗೊಂಡವರು. ನಿನ್ನೆ ರಾತ್ರಿ ವೇಳೆಗೆ ಸೋಮವಾರಪೇಟೆ ಪಟ್ಟಣ ಸೇರಿದಂತೆ ಶಾಂತಳ್ಳಿ ಭಾಗದಲ್ಲಿ ಭಾರೀ ಮಳೆಯಾಗಿದ್ದು, ಈ ಸಂದರ್ಭ ಗುಡುಗು, ಮಿಂಚಿನಾರ್ಭಟವೂ ಜೋರಾಗಿತ್ತು. ೮ ಗಂಟೆ ಸುಮಾರಿಗೆ ಮನೆ ಹಿಂಭಾಗದ ಬಚ್ಚಲು ಮನೆಯಲ್ಲಿ ಸ್ನಾನ ಮಾಡುತ್ತಿದ್ದ

(ಮೊದಲ ಪುಟದಿಂದ) ಸಂದರ್ಭ ಸಿಡಿಲು ಬಡಿದು, ಧರ್ಮಪ್ಪ ಅವರು ಕುಸಿದು ಬಿದ್ದು ೫ ನಿಮಿಷಗಳ ಕಾಲ ಪ್ರಜ್ಞಾಹೀನರಾಗಿದ್ದಾರೆ.

ತಕ್ಷಣ ನೆರೆಮನೆಯವರು ಸಹಾಯಕ್ಕೆ ಧಾವಿಸಿ ಸುಟ್ಟಗಾಯಗಳಿಂದ ಪ್ರಜ್ಞಾಹೀನರಾಗಿದ್ದ ಧರ್ಮಪ್ಪ ಅವರನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಇಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.

ಸಿಡಿಲಿನ ರಭಸಕ್ಕೆ ಮನೆಯ ಗೋಡೆ, ಬಟ್ಟೆ, ವಿದ್ಯುತ್ ತಂತಿಗಳಿಗೆ ಹಾನಿಯಾಗಿದ್ದು, ಕೊಟ್ಟಿಗೆಯಲ್ಲಿದ್ದ ಹಂದಿ ಮರಿಯೊಂದು ಸಾವನ್ನಪ್ಪಿದೆ. ಸ್ಥಳಕ್ಕೆ ಗ್ರಾ.ಪಂ. ಅಧ್ಯಕ್ಷೆ ಸವಿತ ವಿಜಯ, ಸದಸ್ಯ ಚಂಗಪ್ಪ, ತಾ.ಪಂ. ಮಾಜೀ ಅಧ್ಯಕ್ಷ ಕೆ.ಎಂ. ಲೋಕೇಶ್, ಕಂದಾಯ ಇಲಾಖಾ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.