ಮಡಿಕೇರಿ, ಮೇ ೮: ಕೊಡಗು ಜಿಲ್ಲೆಯಲ್ಲಿ ಅಗತ್ಯ ವಸ್ತು ಖರೀದಿಗೆ ನಿಗದಿಪಡಿಸಿರುವ ಸಮಯ ಸದ್ಯಕ್ಕೆ ಯಥಾಸ್ಥಿತಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸ್ಪಷ್ಟಪಡಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಕೊಡಗು ಜಿಲ್ಲಾಡಳಿತ ಅಗತ್ಯ ವಸ್ತು ಖರೀದಿಗೆ ವಾರದ ಎರಡು ದಿನ ಸಮಯ ನಿಗದಿಸಿ ಅವಕಾಶ ನೀಡಿದೆ. ಆದರೆ, ತಾ. ೭ ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕ ಲಾಕ್‌ಡೌನ್ ಘೋಷಿಸಿದ್ದು, ತಾ. ೧೦ ರಿಂದ ಬೆಳಿಗ್ಗೆ ೬ ಗಂಟೆಯಿAದ ೧೦ ಗಂಟೆಯ ತನಕ ಅಗತ್ಯ ವಸ್ತು ಖರೀದಿಗೆ ವಿನಾಯಿತಿ ನೀಡಿದ್ದಾರೆ. ಇದರಿಂದ ಕೊಡಗು ಜಿಲ್ಲೆಯ ಜನ ಗೊಂದಲಕ್ಕೀಡಾಗಿದ್ದರು.

ಈ ಸಂಬAಧ ಜಿಲ್ಲಾಧಿಕಾರಿ ಬಳಿ ಪ್ರತಿಕ್ರಿಯೆ ಬಯಸಿದಾಗ ಉತ್ತರಿಸಿದ ಅವರು, ಜಿಲ್ಲೆಯಲ್ಲಿ ಮಳಿಗೆ ತೆರೆಯಲು ನಿಗದಿಪಡಿಸಿರುವ ದಿನ ಹಾಗೂ ಸಮಯ ಯಥಾಸ್ಥಿತಿಯಲ್ಲಿರಲಿದೆ. ಮುಂದಿನ ಅಧಿಕೃತ ಆದೇಶದ ತನಕ ಮಂಗಳವಾರ ಮತ್ತು ಶುಕ್ರವಾರ ಬೆಳಿಗ್ಗೆ ೬ ರಿಂದ ೧೨ ಗಂಟೆಯ ತನಕ ಅಗತ್ಯ ವಸ್ತುಗಳ ಮಳಿಗೆ ತೆರೆಯಲಿದೆ ಮತ್ತು ತಾ. ೧೨ರ ತನಕ ಬೆಳಿಗ್ಗೆ ೬ ರಿಂದ ೧೦ರ ತನಕ ಹಾಲು ಮತ್ತು ಪತ್ರಿಕೆ ವಿತರಣೆಗೆ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ‘ಶಕ್ತಿ’ಗೆ ಸ್ಪಷ್ಟಪಡಿಸಿದ್ದಾರೆ.