ನವದೆಹಲಿ, ಮೇ 9: ದೇಶೀಯ ಸರಬರಾಜು, ಕೋವಿಡ್-19 ಔಷಧಗಳ ವಾಣಿಜ್ಯ ಆಮದಿನ ವಸ್ತುಗಳಿಗೆ, ಲಸಿಕೆಗಳು, ಆಕ್ಸಿಜನ್ ಕಾನ್ಸಂಟ್ರೇಟರ್‍ಗಳಿಗೆ ಜಿಎಸ್‍ಟಿ ವಿನಾಯಿತಿಯನ್ನು ನೀಡಿದರೆ ಅವುಗಳ ಬೆಲೆ ಹೆಚ್ಚಾಗಬಹುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಒಳ ಬರುವುದರ ಮೇಲೆ ಪಾವತಿ ಮಾಡಲಾದ ತೆರಿಗೆಗಳನ್ನು ಸರಿದೂಗಿಸುವುದಕ್ಕೆ ಉತ್ಪಾದಕರಿಗೆ ಸಾಧ್ಯವಾಗುವುದಿಲ್ಲವಾದ ಕಾರಣ ಈ ಸರಕುಗಳು ಗ್ರಾಹಕರಿಗೆ ದುಬಾರಿಯಾಗಲಿವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ದೇಶೀಯ ಸರಬರಾಜು ಸರಕುಗಳು ಹಾಗೂ ಲಸಿಕೆಗೆ ಸಂಬಂಧಿಸಿದಂತೆ ವಾಣಿಜ್ಯ ಆಮದುಗಳಿಗೆ ಶೇ.5 ರಷ್ಟು ಜಿಎಸ್‍ಟಿ ವಿಧಿಸಲಾಗುತ್ತಿದೆ. ಕೋವಿಡ್-19 ಔಷಧಗಳು ಹಾಗೂ ಆಕ್ಸಿಜನ್ ಕಾನ್ಸಂಟ್ರೇಟರ್ ಗಳಿಗೆ ಶೇ.12 ರಷ್ಟು ಜಿಎಸ್‍ಟಿ ವಿಧಿಸಲಾಗುತ್ತಿದೆ. ಈ ಸರಕುಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿಯನ್ನು ನೀಡಿದಲ್ಲಿ, ಇನ್ಪುಟ್ ತೆರಿಗೆಯನ್ನು ಸರಿದೂಗಿಸಲು ಸಾಧ್ಯವಾಗದೇ, ತೆರಿಗೆ ವಿನಾಯಿತಿಯ ಲಾಭವನ್ನು ಕೊನೆಯ ಗ್ರಾಹಕನಿಗೆ ತಲುಪಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಶೇ.5 ರಷ್ಟು ಜಿಎಸ್‍ಟಿ ದರದಿಂದ ಉತ್ಪಾದಕರು ಐಟಿಸಿಯನ್ನು ಬಳಕೆ ಮಾಡಿಕೊಳ್ಳಬಹುದಾಗಿದ್ದು, ಐಟಿಸಿ ಹೆಚ್ಚುವರಿ ಆದಲ್ಲಿ ಮರುಪಾವತಿಗೆ ಅವಕಾಶವಿರಲಿದೆ, ಆದ್ದರಿಂದ ಜಿಎಸ್‍ಟಿ ವಿನಾಯಿತಿ ಗ್ರಾಹಕರಿಗೆ ಸಹಕಾರಿಯಾಗದೇ ಪ್ರತಿರೋಧಕವಾಗಬಲ್ಲದು ಎಂದು ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.