ಬೆಂಗಳೂರು, ಮೇ 9: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಮುಂಬೈ ಹಾಗೂ ಚೆನ್ನೈ ಮಾದರಿಯಲ್ಲಿಯೇ ಕೋವಿಡ್ ನಿರ್ವಹಣೆಗಾಗಿ ವಾರ್ಡ್ ಮಟ್ಟದಲ್ಲಿ ತುರ್ತು ಸ್ಪಂದನಾ ಸಮಿತಿ ರಚಿಸಲಾಗುವುದು ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ. ಈ ಸಂಬಂಧ ಭಾನುವಾರ ಅಧಿಕಾರಿ ಗಳೊಂದಿಗೆ ವಚ್ರ್ಯುವಲ್ ಸಭೆ ನಡೆಸಿದ ಲಿಂಬಾವಳಿ, ಕೋವಿಡ್ ಸೋಂಕನ್ನು ವಾರ್ಡ್ ಮಟ್ಟದಲ್ಲೇ ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ ಈ ಸಮಿತಿ ರಚಿಸಲು ಸರ್ಕಾರ ಆದೇಶ ಹೊರಡಿಸಿದೆ. ಬಿಬಿಎಂಪಿಯ ವಾರ್ಡ್ ಮಟ್ಟದಲ್ಲಿ ಕೋವಿಡ್ ನಿರ್ವಹಣೆ ದೃಷ್ಟಿಯಿಂದ ಇದು ಸಹಕಾರಿಯಾಗಲಿದೆ ಎಂದರು. ನಗರದಲ್ಲಿ ಕೋವಿಡ್ ಪಾಸಿಟಿವ್ ಬಂದವರು ನೇರವಾಗಿ ಆಸ್ಪತ್ರೆಯಲ್ಲಿ ಹಾಸಿಗೆ ಬೇಕು ಎನ್ನುತ್ತಿದ್ದಾರೆ. ಆದರೆ ಎಲ್ಲರೂ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವ ಅವಶ್ಯಕತೆಯಿಲ್ಲ. ಮನೆಯಲ್ಲಿ ವ್ಯವಸ್ಥೆ ಇಲ್ಲದವರು ಕೋವಿಡ್ ಆರೈಕೆ ಕೇಂದ್ರ ಅಥವಾ ಸ್ಥಿರೀಕರಣ ಕೇಂದ್ರಗಳಲ್ಲಿ ಹೋಗಿ ಆರೈಕೆ ಪಡೆಯಬಹುದು. ಇದರ ಜೊತೆ ವಾರ್ಡ್ ಮಟ್ಟದಲ್ಲಿ ಕೂಡಲೇ ಟ್ರಯಾಜಿಂಗ್ ಸೆಂಟರ್ ಮಾಡಿ, ಐಸೋಲೇಷನ್ ಇರುವವರಿಗೆ ಸರಿಯಾದ ಉಪಚಾರ ಮಾಡಿದಾದ ಸಮಸ್ಯೆ ನಿವಾರಣೆಯಾಗಲಿದೆ ಎಂದರು.