ಮಾನ್ಯರೆ, ಕೊಡಗಿನಲ್ಲಿ ರೂಪಾಂತರಿ ಕೊರೊನಾ ಮಹಾಮಾರಿ ಮಾಲೆ ಪಟಾಕಿಯಂತೆ ಪಕ್ಕ ಪಕ್ಕ ಮನೆಗಳಿಗೆ ಅಷ್ಟೇ ವೇಗವಾಗಿ ಸಿಡಿಯುತ್ತಲಿದೆ. ಸೋಮವಾರಪೇಟೆ ಪಟ್ಟಣದ ಸುತ್ತಮುತ್ತಲಿನಲ್ಲಿ ಸೋಂಕು ಕಾಣಿಸಿಕೊಂಡವನ/ಳ ಮನೆ ಸೀಲ್ಡೌನ್ ಆದರೆ 14 ದಿನ(ಎರಡು ವಾರ)ಗಳವರೆಗೆ ಆ ಮನೆಯ ಮಂದಿ ಹೊರ ಬರುವಂತಿಲ್ಲ. ಮಕ್ಕಳು ಮರಿ, ವಯಸ್ಸಾದವರು ಅನಾರೋಗ್ಯ ಪೀಡಿತರೂ ಆ ಮನೆಯೊಳಗೆ ಇರಬಹುದು. ಅಧಿಕಾರಿಗಳು ಬಂದು ಟೇಪ್ ಹಾಕಿ ಅವರ ಕರ್ತವ್ಯ ಮುಗಿಸಿ ಹೋಗುತ್ತಾರೆ. ನಂತರದ 14 ದಿನಗಳು? ಸ್ವಲ್ಪಮಟ್ಟಿಗೆ ಅನುಕೂಲವಂತ ಮನೆಯವರು ಅವರಿಗೆ ಬೇಕಾದ ಹಾಲು, ವಸ್ತುಗಳನ್ನು ಪರಿಚಯಸ್ಥರ ಮೂಲಕ ತರಿಸಿಕೊಂಡರೆ, ದಿನಗೂಲಿ ಮಾಡಿ ಅಂದಿನಂದಿನ ಜೀವನ ಸಾಗಿಸುವ ಮನೆಯವರ ಗೋಳು? "ಲಾಕ್ಡೌನ್ನಿಂದಾಗಿ ಕೈಯ್ಯಲ್ಲಿ ಕೆಲಸವಿಲ್ಲ, ಅದೇ ಸಮಯಕ್ಕೆ ಕೊರೊನಾ ಸೋಂಕಿತರಾಗಿ ಮನೆಯೊಳಗೆ ಬಂಧಿಯಾಗಿದ್ದೇವೆ, ವಾರದ ಸಂಘದ ಸಾಲ ಮರುಪಾವತಿಸಲು ಅಸಾಧ್ಯರಾಗಿದ್ದೇವೆ, ಅವರಿಂದಲೂ ಸಾಲಕಟ್ಟಿಕೊಡಿ ಎಂಬ ಒತ್ತಡ ಬರುತ್ತಿದೆ. ಅಕ್ಕಪಕ್ಕದ ಮನೆಯವರು ಸೋಂಕಿನ ಭಯದಿಂದ ಮುಂದೆ ಬಂದು ಸಹಾಯ ಮಾಡಲು ಹೆದರುತ್ತಿದ್ದಾರೆ. ನಮಗೆ ಏನು ಮಾಡಬೇಕೆಂದು ದಿಕ್ಕು ತೋಚದಂತಾಗಿದೆ. ನಮ್ಮಗೋಳು ಕೇಳುವವರೇ ಇಲ್ಲದಂತಾಗಿದೆ.
ಸೀಲ್ಡೌನ್ ಆಗಿ ಮನೆಯಲ್ಲಿರುವವರ ಆರೋಗ್ಯ ವಿಚಾರಿಸುವವರು ಇಲ್ಲ, ಅಗತ್ಯ ಸಾಮಗ್ರಿಗಳನ್ನು ನೀಡಿ ಸಹಕರಿಸುವವರೂ ಇಲ್ಲ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಪಟ್ಟಣ ಪಂಚಾಯಿತಿಗೆ ಒಳಪಡುವ ಕೆಲವು ವಾರ್ಡ್ಗಳಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದ್ದು, ಇನ್ನಾದರು ಜಿಲ್ಲಾಡಳಿತದಿಂದ ಸೀಲ್ಡೌನ್ ಆದ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ನೀಡುವುದರ ಮೂಲಕ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಲಿ ಎಂಬುದೇ ನನ್ನ ಆಶಯ.
- ಎಂ.ಎ. ರುಬೀನಾ, ಸೋಮವಾರಪೇಟೆ.