ಮುಳ್ಳೂರು, ಮೇ ೮: ಕೊಡಗು-ಹಾಸನ ಗಡಿ ಭಾಗದಲ್ಲಿರುವ ಆಲೂರು-ಸಿದ್ದಾಪುರ ಗ್ರಾ.ಪಂ.ನ ಕೋವಿಡ್ ಕಾರ್ಯಪಡೆ ಸಮಿತಿ ಸಭೆ ಗ್ರಾ.ಪಂ. ಅಧ್ಯಕ್ಷ ಮೋಹನ್ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಮುದಾಯ ಭವನದಲ್ಲಿ ನಡೆಯಿತು. ಸಮಿತಿ ಸಭೆಯಲ್ಲಿ ಗ್ರಾ.ಪಂ. ಪಿಡಿಒ ಪೂರ್ಣಿಮ ಮಾತನಾಡಿ, ರಾಜ್ಯ ಮತ್ತು ಕೊಡಗು ಜಿಲ್ಲೆಯಾದ್ಯಂತ ಕೋವಿಡ್ ಸೋಂಕು ಮತ್ತು ಸಾವು ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸುವಲ್ಲಿ ಸರಕಾರ ಮತ್ತು ಆರೋಗ್ಯ ಇಲಾಖೆಯ ಮಾರ್ಗಸೂಚಿಯನ್ನು ಜನರು ಕಡ್ಡಾಯವಾಗಿ ಪಾಲಿಸುವಂತೆ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಸಭೆಯಲ್ಲಿ ಆಲೂರು-ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯು ಹಾಸನ ಜಿಲ್ಲೆ ಗಡಿ ಭಾಗದಲ್ಲಿರುವುದರಿಂದ ಕೋವಿಡ್ ಸೋಂಕು ಹರಡದಂತೆ ಎಚ್ಚರವಹಿಸುವುದು, ಕೋವಿಡ್ ಸೋಂಕಿತರ ಮನೆಗಳನ್ನು ಸೀಲ್ಡೌನ್ ಮಾಡಿದ ಮೇಲೆ ಅವರು ಮನೆಯಿಂದ ಹೊರ ಬಾರದಂತೆ ಕಾರ್ಯಪಡೆ ನಿಗಾವಹಿಸುವುದು, ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬಂದವರ ಬಗ್ಗೆ ಮಾಹಿತಿ ಪಡೆದುಕೊಂಡು ಅಂತವರು ಮನೆಯಲ್ಲಿ ಕ್ವಾರಂಟೈನ್ ಆಗಿರುವಂತೆ ಸೂಚಿಸುವುದು ಸೇರಿದಂತೆ ಸರಕಾರದ ಮಾರ್ಗಸೂಚಿಯನ್ನು ಜನರು ಪಾಲಿಸುವಂತೆ ಗಮನ ಹರಿಸಲು ತೀರ್ಮಾನಿಸಲಾಯಿತು.
ಗ್ರಾ.ಪಂ. ಉಪಾಧ್ಯಕ್ಷೆ ದಮಯಂತಿ ಕರುಂಬಯ್ಯ, ಸದಸ್ಯರಾದ ಪಿ.ಎನ್. ಗಂಗಾಧರ್, ಪಿ.ಎಸ್. ಸತೀಶ್, ಯಮುನ ಸುರೇಶ್, ರಂಗಶೆಟ್ಟಿ, ಅಂಗನವಾಡಿ ಕಾರ್ಯಕರ್ತೆ ಜ್ಯೋತಿ, ಆಶಾ ಕಾರ್ಯಕರ್ತೆಯರಾದ ಶುಭ, ರಾಧ, ಮೀನಾಕ್ಷಿ, ರಮ್ಯ, ಗ್ರಾ.ಪಂ. ಕಚೇರಿ ಸಿಬ್ಬಂದಿ ಹಾಜರಿದ್ದರು.