ಭಾಗಮಂಡಲ, ಮೇ ೬: ೯೦ಕ್ಕೂ ಅಧಿಕ ಕೊರೊನಾ ಪ್ರಕರಣಗಳು ಭಾಗಮಂಡಲ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದೆ. ಮಡಿಕೇರಿ ತಾಲೂಕಿನ ಪಂಚಾಯಿತಿಗಳಲ್ಲಿ ಅತಿ ಹೆಚ್ಚಿನ ಪ್ರಕರಣಗಳು ಇಲ್ಲಿ ದಾಖಲಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರ ಕೂಡಾ ಸೀಲ್‌ಡೌನ್ ಆಗಿದೆ. ಇದರ ನಡುವೆ ಸಂಪೂರ್ಣ ಲಾಕ್‌ಡೌನ್ ಆಗಿರುವುದರಿಂದ ಕೊರೊನಾ ಸೋಂಕಿತರು ಆಸ್ಪತ್ರೆಗೆ ಬರಲಾಗದೆ ವಾಹನ ಸೌಕರ್ಯ ಇಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ.

ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಕಾಳನ ರವಿ ಭಾಗಮಂಡಲದಲ್ಲಿ ಕೊರೊನಾ ಸೋಂಕಿತರಿಗೆ ನೆರವಾಗುತ್ತಿದ್ದಾರೆ. ಕಳೆದ ಮೂರು ನಾಲ್ಕು ದಿನಗಳಿಂದ ಹದಿನೈದಕ್ಕೂ ಅಧಿಕ ಕೊರೊನಾ ಪಾಸಿಟಿವ್ ಪ್ರಕರಣದ ರೋಗಿಗಳನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಅಗತ್ಯಬಿದ್ದಲ್ಲಿ ಮಡಿಕೇರಿಗೂ ಕರೆದೊಯ್ಯುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಬಾಡಿಗೆ ವಾಹನಗಳು ಸೋಂಕಿತರಿಗೆ ಸಿಗುತ್ತಿಲ್ಲ. ಪರಿಸ್ಥಿತಿಯನ್ನು ಅವಲೋಕಿಸಿ ತಾನು ಈ ಕೆಲಸಕ್ಕೆ ಮುಂದಾಗಿದ್ದೇನೆ. ಭಾಗಮಂಡಲ ವ್ಯಾಪ್ತಿಯ ಯಾವುದೇ ಸೋಂಕಿತರು ನೆರವಿಗೆ ತನ್ನನ್ನು ಸಂಪರ್ಕಿಸ ಬಹುದೆಂದು ಅವರು ತಿಳಿಸಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸೇರಿ ಸಿಬ್ಬಂದಿಗಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ವೈದ್ಯರು ವಸತಿಗೃಹದಲ್ಲಿದ್ದುಕೊಂಡು ರೋಗಿಗಳಿಗೆ ಮಾಹಿತಿ ನೀಡುತ್ತಿದ್ದಾರೆ. ದೂರವಾಣಿ ಮೂಲಕವೂ ಸೋಂಕಿತರಿಗೆ ಬೇಕಾದ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ಭಾಗಮಂಡಲದಲ್ಲಿ ಆಂಬ್ಯುಲೆನ್ಸ್ ಸೌಕರ್ಯವಿದ್ದರೂ ಅದರ ಚಾಲಕರೂ ಕೂಡ ಕೊರೊನಾ ಸೋಂಕಿತರಾಗಿರುವುದರಿAದ ತುರ್ತು ಚಿಕಿತ್ಸೆಗೆ ಮಡಿಕೇರಿಯಿಂದಲೇ ಆಂಬ್ಯುಲೆನ್ಸ್ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆಂಬ್ಯುಲೆನ್ಸ್ಗೆ ಡ್ರೆöÊವರ್ ವ್ಯವಸ್ಥೆ ಮಾಡುವುದು ಒಳಿತು ಎಂದು ಸಾರ್ವಜನಿಕರು ಸಲಹೆ ನೀಡಿದ್ದಾರೆ. ಭಾಗಮಂಡಲದಲ್ಲಿ ಇದುವರೆಗೆ ೯೨ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಕೊರೊನಾ ತಡೆಗಟ್ಟುವಲ್ಲಿ ಆಶಾ ಕಾರ್ಯಕರ್ತೆ ಯರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಪಿಡಿಒ, ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಸಕ್ರಿಯವಾಗಿ ನಿರತರಾಗಿದ್ದಾರೆ.