ನಾಪೋಕ್ಲು, ಮೇ ೪: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆಯನ್ನು ಪ್ರತಿದಿನ ನೀಡಲಾಗುತ್ತಿದ್ದು, ಲಸಿಕೆ ಹಾಕಿಸಿಕೊಳ್ಳುತ್ತಿರುವವರ ಸಂಖ್ಯೆ ಅಧಿಕಗೊಂಡಿದೆ. ಪ್ರತಿದಿನ ೭೦-೧೦೦ ಮಂದಿಗೆ ಲಸಿಕೆಯನ್ನು ನೀಡಲಾಗುತ್ತಿದೆ ಎಂದು ವೈದ್ಯಾಧಿಕಾರಿ ಡಾ. ಪೂವಯ್ಯ ತಿಳಿಸಿದ್ದಾರೆ. ಈಗಾಗಲೇ ಮೊದಲ ಸುತ್ತಿನ ಲಸಿಕೆಯನ್ನು ೧೯೦೦ ಮಂದಿ ಪಡೆದುಕೊಂಡಿದ್ದಾರೆ. ಲಸಿಕೆಯನ್ನು ಪಡೆದುಕೊಳ್ಳುವವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಹೊರರೋಗಿಗಳ ಚಿಕಿತ್ಸೆಯನ್ನು ಪ್ರತ್ಯೇಕವಾಗಿ ಕೈಗೊಳ್ಳಲಾಗುತ್ತಿದೆ ಎಂದರು.

ಈಗಾಗಲೇ ಎರಡನೇ ಬಾರಿಗೆ ವ್ಯಾಕ್ಸಿನ್ ಮಾಡಲಾಗುತ್ತಿದ್ದು ಮೊದಲು ಲಸಿಕೆ ಪಡೆದುಕೊಂಡವರು ನಿಗದಿತ ಅವಧಿಯಲ್ಲಿ ಮರು ಲಸಿಕೆ ಹಾಕಿಸಿಕೊಳ್ಳುವಂತೆ ಈ ಸಂದರ್ಭ ತಿಳಿಸಿದರು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ವ್ಯಾಕ್ಸಿನ್ ಕೊರತೆ ಇಲ್ಲ. ಲಸಿಕೆ ಹಾಕಿಸಿಕೊಳ್ಳದವರು ಕೂಡಲೇ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ ಅವರು, ಕೋವಿಡ್ ಬಗ್ಗೆ ಆತಂಕ ಬೇಡ. ಆದರೆ ಎಚ್ಚರದಿಂದಿರಬೇಕು ಭಯಪಡಬೇಕಾದ ಅವಶ್ಯಕತೆ ಇಲ್ಲ. ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ದಿನಾಂಕವನ್ನು ಸರಕಾರದವರು ಪ್ರಕಟಿಸಿದ ಮೇಲೆ ಅವರಿಗೂ ಲಸಿಕೆ ಹಾಕಲಾಗುವುದು.

ಇದರ ನೋಂದಣಿಯನ್ನು ಆನ್‌ಲೈನ್ ಮುಖಾಂತರ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಭಯಬಿಟ್ಟು ಲಸಿಕೆ ಹಾಕಿಸಿಕೊಂಡು ಮಾರಕ ರೋಗದಿಂದ ಮುಕ್ತರಾಗಲು ಸಹಕಾರ ನೀಡಬೇಕು ಎಂದ ಅವರು, ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಹೊರರೋಗಿಗಳು ಆಸ್ಪತ್ರೆಗೆ ಬರುತ್ತಿದ್ದು, ಅವರಿಗೂ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ತನ್ನೊಂದಿಗೆ ಡಾ. ಮದನ್, ಇಬ್ಬರು ವೈದ್ಯಾಧಿಕಾರಿಗಳು, ಸಿಬ್ಬಂದಿಯವರು ಕರ್ತವ್ಯದಲ್ಲಿದ್ದೇವೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಅಧೀಕ್ಷಕ ಸುದರ್ಶನ್, ನರ್ಸ್ಗಳಾದ ಶಶಿಕಲಾ, ಅಶ್ವಿನಿ, ಸುಶೀಲಮ್ಮ, ರಿಜಿಸ್ಟಾçರ್ ಜನಿತ ಇದ್ದರು.