ಖಂಡಿತಾ ವಾಸ್ತವಿಕ ನುಡಿ ಇದು. ಚೀನಾ ಮೂಲದ ಕಣ್ಣಿಗೆ ಕಾಣದ ವೈರಸ್ ಕಳೆದ ವರ್ಷದ ಮಾರ್ಚ್ನಲ್ಲಿ ಭಾರತಕ್ಕೆ ಧಾಳಿ ಯಿಟ್ಟಾಗ ಇದ್ದ ಪರಿಸ್ಥಿತಿ ಸುಧಾರಿಸದ ಮಟ್ಟಿಗೆ ಈಗ ಭೀಕರವಾಗಿ ಪರಿವರ್ತನೆಯಾಗಿದೆ.
ಜನ ಮೆಚ್ಚುತ್ತಾರೆಯೋ, ಟೀಕಿಸುತ್ತಾರೆಯೋ... ವ್ಯಂಗ್ಯವಾಗಿ ಮಾತನಾಡುತ್ತಾರೆಯೋ.. ಯಾವುದನ್ನೂ ಲೆಕ್ಕಿಸದೇ ತಮ್ಮ ಮುಂದೆ ಇರುವ ರೋಗಿಯ ಆರೋಗ್ಯಕ್ಕಾಗಿ ಕಣ್ಣಿಗೆ ಕಾಣುವ ದೈವೀಸ್ವರೂಪದವರು ಕಣ್ಣಿಗೆ ಕಾಣದ ವೈರಸ್ ವಿರುದ್ಧ ವೈದ್ಯರು, ವೈದ್ಯಕೀಯ ಸಿಬ್ಬಂದಿ ಸಮರ ಮುಂದುವರೆಸಿದ್ದಾರೆ. ಕೋವಿಡ್ ಆಸ್ಪತ್ರೆಯಾಗಿರಲಿ, ಸರ್ಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಖಾಸಗಿ ಆಸ್ಪತ್ರೆಗಳಲ್ಲಿ ನಿರಂತರ ಕಾರ್ಯತತ್ಪರರಾಗಿರುವ ವೈದ್ಯ, ವೈದ್ಯಕೀಯ ಸಿಬ್ಬಂದಿಗಳ ಸೇವೆ ಊಹೆಗೂ ಮೀರಿದ್ದು.
ಭಾರತದ ಸಮಸ್ಯೆ ಎಂದರೆ... ಈ ದೇಶದಲ್ಲಿ ಚುನಾವಣಾ ಗೆಲುವಿಗೋಸ್ಕರ ವೆಚ್ಚ ಮಾಡುವ ಹಣವನ್ನು ಆರೋಗ್ಯ ಕ್ಷೇತ್ರಕ್ಕೆ ವಿನಿಯೋಗಿಸಲಾಗುತ್ತಿಲ್ಲ. ರಸ್ತೆ, ಸೇತುವೆ, ಚರಂಡಿಗೆ ಹಾಕಲಾಗುವ ಅನುದಾನವನ್ನು ಆಕ್ಸಿಜನ್ ಘಟಕ ಸ್ಥಾಪನೆಗೆ ವೆಚ್ಚ ಮಾಡುತ್ತಿಲ್ಲ.. ವಿವಿಧ ಧರ್ಮಗಳ ಪ್ರಾರ್ಥನಾ ಮಂದಿರ ನಿರ್ಮಾಣಕ್ಕೆ ಇರುವ ಆಸಕ್ತಿ ಆಸ್ಪತ್ರೆ ನಿರ್ಮಿಸಲು ಇಲ್ಲ..
‘ದೇವರೇ ನಮ್ಮನ್ನು ಚೆನ್ನಾಗಿಟ್ಟಿರು’ ಎಂದು ಬೊಗಸೆಯೊಡ್ಡಿ ಬೇಡುವ ಕೈಗಳು, ‘ದೇವರೇ ನಮ್ಮನ್ನು ನೋಡಿಕೊಳ್ಳುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳನ್ನು ಚೆನ್ನಾಗಿಟ್ಟಿರು’ ಎಂದು ಕೋರುವುದಿಲ್ಲ...
‘ಸಂಕಟ ಬಂದಾಗ ವೆಂಕಟರಮಣ’ ಎಂಬAತೆ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ತೆರಳಿದಾಗ ಮಾತ್ರ ವೈದ್ಯರು, ನರ್ಸ್ಗಳ ಪ್ರಾಮುಖ್ಯತೆಯ ಅರಿವಾಗುತ್ತದೆ. ‘ವೈದ್ಯೋ ನಾರಾಯಣ ಹರಿ’ ಎಂಬುದು ಮಂತ್ರವಾಗುತ್ತದೆ.
ಭಾರತದಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳ ತೀವ್ರ ಕೊರತೆಯಿದೆ. ಮೊದಲಿನಿಂದಲೂ ಭಾರತ ಈ ವಿಚಾರದಲ್ಲಿ ಎಚ್ಚರಿಕೆ ವಹಿಸಲೇ ಇಲ್ಲ. ಹೀಗಾಗಿಯೇ ದೇಶದ ಆರೋಗ್ಯ ಕ್ಷೇತ್ರದಲ್ಲಿ ಇಂದಿಗೂ ಶೇ. ೭೦ ರಷ್ಟು ಹುದ್ದೆಗಳು ಭರ್ತಿಯಾಗದೇ ಖಾಲಿ ಉಳಿದಿದೆ.
ಬಹುಷ ಕೊರೊನಾ ಸುನಾಮಿ ಇದೇ ರೀತಿ ಮುಂದುವರೆದರೆ ದೇಶದಲ್ಲಿ ವೈದ್ಯರು, ನರ್ಸ್ಗಳ ಕೊರತೆಯೇ ಬಹಳ ದೊಡ್ಡ ಸಮಸ್ಯೆಯಾಗಿ ವೈದ್ಯಕೀಯ ವಿಪತ್ತು. ಸಂಭವಿಸುವ ಸಾಧ್ಯತೆಯೂ ಇಲ್ಲದಿಲ್ಲ. ಇಂಥ ದಿನಗಳು ಬಂದದ್ದೇ ಆದಲ್ಲಿ ಪರಿಸ್ಥಿತಿ ಊಹಿಸಲೇ ಆಗದಷ್ಟು ಭಯಾನಕವಾಗಲಿದೆ.
ಕೊಡಗು ಜಿಲ್ಲೆ ಸೇರಿದಂತೆ ದೇಶದಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಕೊರೊನಾದ ಎರಡನೇ ಅಲೆಯಲ್ಲಿ ತೀವ್ರವಾಗಿ ನಲುಗಿದ್ದಾರೆ. ಹುದ್ದೆಗಳ ಕೊರತೆಯಿಂದಾಗಿ ಅತ್ಯಧಿಕ ಗಂಟೆಗಳ ಕರ್ತವ್ಯ ನಿರ್ವಹಣೆಯ ಹೊಣೆ ವೈದ್ಯರು, ನರ್ಸ್ಗಳ ಮೇಲೆ ಇದೆ. ಏಪ್ರಿಲ್ ತಿಂಗಳೊAದರಲ್ಲಿಯೇ ಕರ್ನಾಟಕದ ನಾಲ್ವರೂ ಸೇರಿದಂತೆ ದೇಶದಲ್ಲಿ ೩೪ ವೈದ್ಯರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಕೊರೊನಾ ಸೋಂಕು ಪ್ರಕರಣ ಕಾಣಿಸಿಕೊಂಡ ಬಳಿಕ ಈವರೆಗೆ ೭೩೦ ವೈದ್ಯರು ಸಾವನ್ನಪ್ಪಿದ್ದಾರೆ ಎಂಬ ಆತಂಕಕಾರಿ ಅಂಶವನ್ನು ಭಾರತೀಯ ವೈದ್ಯಕೀಯ ಸಂಘ ಹೇಳಿದೆ.
ಯಾವ ವೈದ್ಯನೂ ತನ್ನ ರೋಗಿ ಸಾವನ್ನಪ್ಪಲಿ ಎಂದು ಬಯಸಲಾರ. ಆದರೆ, ಕೊರೊನಾ ಸೋಂಕು ಶ್ವಾಸಕೋಶಕ್ಕೆ ವ್ಯಾಪಿಸಿ ಚೇತರಿಸಿಕೊಳ್ಳಲಾಗದ ಮಟ್ಟಿಗೆ ಆತನ ಆರೋಗ್ಯ ಸ್ಥಿತಿ ತಲುಪಿ ಕೊನೆ ಉಸಿರೆಳೆದರೆ ಕಣ್ಣಿಗೆ ಕಾಣದೇ ಶತ್ರುವಿನಂತೆ ನಮ್ಮ ವಿರುದ್ಧ ಅಟ್ಟಹಾಸ ಮೆರೆಯುತ್ತಿರುವ ವೈರಸ್ ಬಗ್ಗೆ ಆಕ್ರೋಷ ಉಂಟಾಗುತ್ತದೆ. ಅಂತೆಯೇ ಅನವಶ್ಯಕವಾಗಿ ಕೊರೊನಾಕ್ಕೆ ಬಲಿಯಾದವರ ಬಗ್ಗೆಯೂ ಬೇಸರ ಉಂಟಾಗುತ್ತದೆ. ಎಂದು ವೈದ್ಯರೋರ್ವರು ನೋವಿನಿಂದ ಹೇಳಿದರು.
ಮುಂದಿನ ದಿನಗಳಲ್ಲಿ ಹೇಗಿರಬಹುದು?
ಕಳೆದ ವಾರದಿಂದ ಭಾರತದಲ್ಲಿ ಪ್ರತಿನಿತ್ಯ ೪ ಲಕ್ಷದಷ್ಟು ಕೊರೊನಾ ಸೋಂಕು ಪ್ರಕರಣ ವರದಿಯಾಗುತ್ತಿದೆ. ಇವರಲ್ಲಿ ಪ್ರತಿಯೋರ್ವ ಸೋಂಕಿತನೂ ಕನಿಷ್ಟ ೪ ಮಂದಿಗೆ ಸೋಂಕು ತಗುಲಿಸಿದ್ದಾನೆ ಎಂದು ಲೆಕ್ಕ ಹಾಕಿದರೂ ಪ್ರತಿನಿತ್ಯ ಕನಿಷ್ಟ ೧೬ ಲಕ್ಷ ಸೋಂಕಿತರು ಹೊಸದ್ದಾಗಿ ರೋಗಿಗಳ ಸರದಿಗೆ ದಾಖಲಾಗುತ್ತಾರೆ. ಈ ಪೈಕಿ ಶೇ.೫ ಮಂದಿಗೆ ತುರ್ತು ನಿಗಾಘಟಕದಲ್ಲಿ ಚಿಕಿತ್ಸೆ ಬೇಕು ಎಂದರೂ ಕನಿಷ್ಟ ೭೦ ಸಾವಿರ ಐಸಿಯುಗಳು ಬೇಕಾಗಿದೆ. ನಿಜ. ನಾವೆಲ್ಲಾ ಐಸಿಯು, ಆಕ್ಸಿಜನ್ ದೊರಕುತ್ತಿಲ್ಲ ಎಂದು ಟೀಕೆ, ಬೇಸರ ವ್ಯಕ್ತಪಡಿಸುತ್ತಿದ್ದೇವೆಯೇ ವಿನಾ ಮುಂದಿನ ದಿನಗಳಲ್ಲಿ ಹತ್ತು ಪಟ್ಟು ಹೆಚ್ಚಾಗುವ ರೋಗಿಗಳ ಶುಷ್ರೂಶೆಗೆ ಅನಿವಾರ್ಯವಾಗುವ ವೈದ್ಯರು, ನರ್ಸ್ಗಳ ಬಗ್ಗೆ ಚಿಂತಿಸುತ್ತಲೇ ಇಲ್ಲ ನಿಜವಾದ ದೌರ್ಭಾಗ್ಯ ಇದು ಎಂದು ವಿಷಾಧಿಸುತ್ತಾರೆ ಹೆಸರಾಂತ ವೈದ್ಯ ಡಾ. ದೇವಿಶೆಟ್ಟಿ.
ಕೊರೊನಾ ವಿರುದ್ಧ ಸಮರ ಪ್ರಾರಂಭವಾಗಿದೆ. ದೇವರ ಸಮಾನ ಎಂದೇ ಪ್ರತಿಬಿಂಬಿಸಲ್ಪಟ್ಟಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಈ ಯುದ್ಧದಲ್ಲಿ ಮುಂಚೂಣಿ ನಾಯಕರಾಗಿದ್ದಾರೆ. ಭಾರತದಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳಿಗೆ ಸಮರ ಸೈನಿಕರು ಎಂಬ ಮಾನ್ಯತೆ ನೀಡಲಾಗಿದೆ. ಕೊರೊನಾ ವಿರುದ್ಧದ ಸಮರದಲ್ಲಿ ಸೋತರೆ ಮನುಕುಲವೇ ಸರ್ವನಾಶವಾಗುವ ಅಪಾಯ ಇದೆ. ಗೆಲ್ಲಬೇಕೆಂದರೆ ಯುದ್ಧದಲ್ಲಿ ಮುಂಚೂಣಿಯಲ್ಲಿರುವ ಕೊರೊನಾ ಸಮರ ಸೈನಿಕರ ಆರೋಗ್ಯದ ಬಗ್ಗೆಯೂ ಲಕ್ಷ್ಯಕೊಡಬೇಕಾದ ಅನಿವಾರ್ಯತೆಯಿದೆ. ಸೈನಿಕರೇ ಇಲ್ಲದೇ ಯಾರ ವಿರುದ್ಧ ಹೇಗೆ ಯುದ್ಧ ಮಾಡಲಾದೀತು ಎಂಬ ಪ್ರಶ್ನೆ ಡಾ. ದೇವಿಶೆಟ್ಟಿ ಅವರದ್ದು.
ಡಾ. ದೇವಿಶೆಟ್ಟಿ ನೀಡಿರುವ ಸಲಹೆಗಳನ್ನು ಇದೀಗ ಕೇಂದ್ರ ಸರ್ಕಾರ ಪರಿಗಣಿಸಿ ಅಂತೆಯೇ ಆದೇಶ ನೀಡಿರುವುದು ಉತ್ತಮ ಬೆಳವಣಿಗೆ.
ಡಾ. ದೇವಿಶೆಟ್ಟಿ ನೀಡಿದ್ದ ಸಲಹೆಗಳಾದರು ಏನು?
ಬಿಗಡಾಯಿಸುತ್ತಲೇ ಇರುವ ಪರಿಸ್ಥಿತಿಗೆ ವೈದ್ಯರು, ನರ್ಸ್ಗಳ ಅಗತ್ಯತೆ ಸಾವಿರಾರು ಸಂಖ್ಯೆಯಲ್ಲಿದೆ. ವೈದ್ಯಕೀಯ ಶಿಕ್ಷಣ ಮುಗಿಸಿರುವ, ಪರೀಕ್ಷೆ ಬರೆದಿರುವ , ಹುದ್ದೆಗಾಗಿ ಎದುರು ನೋಡುತ್ತಿರುವ ವೈದ್ಯರು, ನರ್ಸ್ಗಳನ್ನು ೧ ವರ್ಷಗಳ ಕಾಲ ಸರ್ಕಾರ ಸೂಕ್ತ ವೇತನದೊಂದಿಗೆ ಸರ್ಕಾರಿ ಸೇವೆಗೆ ನಿಯೋಜಿಸಿ. ೨.೦೫ ಲಕ್ಷ ನರ್ಸ್ಗಳು ಕೆಲಸಕ್ಕಾಗಿ ಹಾತೊರೆಯುತ್ತಿದ್ದಾರೆ. ಕೂಡಲೇ ನರ್ಸ್ಗಳನ್ನು ೧ ವರ್ಷ ಕಾಲ ಕೋವಿಡ್ ಆಸ್ಪತ್ರೆಗಳಿಗೆ ಭರ್ತಿಮಾಡಬೇಕು. ದೇಶದಲ್ಲಿ ಇದೀಗ ಅಂತಿಮ ವೈದ್ಯಕೀಯ ಪರೀಕ್ಷೆ ಬರೆದಿರುವ ೨೫,೦೦೦ ವೈದ್ಯಕೀಯ ವಿದ್ಯಾರ್ಥಿಗಳು ಲಭ್ಯವಿದ್ದಾರೆ. ಇಂಥವರ ಸೇವೆಯನ್ನು ಪರಿಗಣಿಸಿ. ಕಳೆದ ವರ್ಷದಿಂದ ದೇಶದಲ್ಲಿ ೧೩೦ ಲಕ್ಷ ವಿದ್ಯಾರ್ಥಿಗಳು ಉನ್ನತ ವೈದ್ಯಕೀಯ ಶಿಕ್ಷಣಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಇಂಥ ಯುವ ವೈದ್ಯರನ್ನೂ ಕರ್ತವ್ಯಕ್ಕೆ ನಿಯೋಜಿಸಬೇಕು..
ಕೊರೊನಾ ಪ್ರಾರಂಭಿಕ ಹಂತದಲ್ಲಿ ಭಾರತದಲ್ಲಿ ವೆಂಟಿಲೇಟರ್‌ಗಳ ಅಭಾವ ತೀವ್ರವಾಗಿತ್ತು. ಪಿಪಿಇಗಳು ಇರಲೇ ಇಲ್ಲ. ಅತ್ಯಂತ ತುರ್ತಾಗಿ ಪಿಪಿಇ ಕಿಟ್‌ಗಳು ಭಾರತದಲ್ಲಿಯೇ ಉತ್ಪಾದಿಸಲ್ಪವು. ವೆಂಟಿಲೇಟರ್‌ಗಳೂ ಅಗತ್ಯ ಪ್ರಮಾಣದಲ್ಲಿ ದೊರಕಿದವು. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಇಚ್ಚಾಶಕ್ತಿ ಅತ್ಯಂತ ಹೆಚ್ಚಾಗಿದೆ. ಹೀಗಾಗಿ ಮುಂದಿನ ದಿನಗಳಿಗೆ ಬೇಕಾಗುವ ವೈದ್ಯಕೀಯ ಸಿಬ್ಬಂದಿಗಳನ್ನು ಸೂಕ್ತ ನಿಯಮಗಳ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕೇಂದ್ರದ ನಿರ್ಧಾರ ಒಂದಿಷ್ಟು ಸಮಾಧಾನಕರ.
ಕೊರೊನಾ ಎರಡನೇ ಅಲೆಯ ಬಗ್ಗೆ ಮುಂಜಾಗ್ರತೆ ವಹಿಸದೇ ನಿರ್ಲಕ್ಷ್ಯ ತೋರಿರುವ ಪರಿಣಾಮವೇ ಈಗಿನ ಭೀರಕತೆಯನ್ನು ಎದುರಿಸುವಂತಾಗಿದೆ. ಏಷ್ಯಾ ಖಂಡದ ಪ್ರತೀ ೩ ಜನ ಸೋಂಕಿತರಲ್ಲಿ ೨ ಮಂದಿ ಭಾರತೀಯರು ಇದ್ದಾರೆ. ಏಷ್ಯಾದಲ್ಲಿ ವರದಿಯಾಗುತ್ತಿರುವ ಕೊರೊನಾ ಸೋಂಕಿತ ಪ್ರಮಾಣದಲ್ಲಿ ಭಾರತದ ಪಾಲು ಶೇ. ೭೧ ರಷ್ಟು ಇದೆ ಎಂಬುದು ಭಾರತದಲ್ಲಿ ಹೆಚ್ಚುತ್ತಲೇ ಇರುವ ಅಪಾಯಕ್ಕೂ ನಿದರ್ಶನವಾಗಿದೆ.
ಭಾರತದಲ್ಲಿ ಕಳೆದ ವರ್ಷ ಕೊರೊನಾ ಪ್ರಾರಂಭಿಕ ಹಂತದಲ್ಲಿ ಕಡಮೆ ಪ್ರಕರಣದಳಿದ್ದವು. ಅತ್ಯಂತ ಹೆಚ್ಚಿನ ಭಯ, ಕಾಳಜಿ, ಎಚ್ಚರಿಕೆ ಇತ್ತು. ಈಗ ರೂಪಾಂತರಿಯಾಗಿ ವೈದ್ಯಕೀಯ ಲೋಕವನ್ನೇ ಕಕ್ಕಾಬಿಕ್ಕಿಯಾಗಿಸಿರುವ ಹೊಸ ರೂಪದ ಕೊರೊನಾ ವೈರಸ್ ಅತ್ಯಧಿಕ ಪ್ರಮಾಣದಲ್ಲಿ ವ್ಯಾಪಿಸುತ್ತಲೇ ಇದ್ದರೂ ಭಯ, ಅಂಜಿಕೆ, ಎಚ್ಚರಿಕೆ ತೀರಾ ಕನಿಷ್ಟ ಎಂಬAತಾಗಿದೆ.
ಜನರಲ್ ವಾರ್ಡ್ಗಳಿಗೂ, ಕೊರೊನಾ ವಾರ್ಡ್ಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಇದು ರೋಗಿಗಳಿಗೆ ಮಾತ್ರವಲ್ಲ ಅವರ ಸಂಬAಧಿಕರಿಗೂ ಅರ್ಥವಾಗುತ್ತಿಲ್ಲ. ಜನರಲ್ ವಾರ್ಡ್ನಲ್ಲಿ ಗಮನಿಸಿದಂತೆಯೇ ಕೊರೊನಾ ವಾರ್ಡ್ನಲ್ಲಿಯೂ ನೋಡಬೇಕೆಂಬ ಚಿಂತನೆ ಹಲವರಲ್ಲಿ ಇದೆ. ವೈದ್ಯರು, ನರ್ಸ್ಗಳು ಪಿಪಿಇ ಕಿಟ್ ಧರಿಸಿ ಗಂಟೆಗಟ್ಟಲೆ ರೋಗಿಗಳ ಚಿಕಿತ್ಸೆಗೆ ಮುಂದಾಗಿದ್ದಾರೆ. ಪಿಪಿಇ ಕಿಟ್‌ನಿಂದಾಗಿ ಬೆವರಿ ದೈಹಿಕವಾಗಿಯೂ ಹೈರಾಣಾಗುತ್ತಿದ್ದಾರೆ. ರೋಗಿಗಳನ್ನೂ ನೋಡಿ ನೋಡಿ ತಾವೇ ರೋಗಿಗಳಾಗುತ್ತಿದ್ದಾರೆ. ಆಸ್ಪತ್ರೆ ಕರ್ತವ್ಯ ಮುಗಿಸಿ ಮನೆಗೆ ತೆರಳುವಾಗ ತಮಗೂ ಎಲ್ಲಿ ಸೋಂಕು ಇದೆಯೋ,, ಆ ಸೋಂಕು ಮನೆಯಲ್ಲಿರುವ ಹಿರಿಯರನ್ನೂ, ಮಕ್ಕಳನ್ನು ಎಲ್ಲಿ ಭಾದಿಸುತ್ತದೆಯೋ ಎಂಬ ಆತಂಕ ಪ್ರತೀ ವೈದ್ಯ, ನರ್ಸ್ಗಳಲ್ಲಿದೆ ಎಂದು ವೈದ್ಯರೋರ್ವರು ಮನದಾಳದ ಅಳಲು ತೋಡಿಕೊಂಡರು.
ಪಿಪಿಇ ಕಿಟ್ ಧರಿಸಿ ರೋಗಿಗಳನ್ನು ಆರೈಕೆ ಮಾಡುವ ಪ್ರಕ್ರಿಯೆ ಅನುಭವಿಸಿದವರಿಗೆ ಮಾತ್ರ ಅರ್ಥವಾದೀತು. ಪ್ರತಿಯೋರ್ವ ಸೋಂಕಿತನೂ ಆಸ್ಪತ್ರೆಯಿಂದ ಗುಣಮುಖವಾಗಿ ತೆರಳುವಾಗ ನಮ್ಮ ಮನಸ್ಸಿಗೆ ಉಂಟಾಗುವ ಸಮಾದಾನ ಈ ನೋವನ್ನೆಲ್ಲಾ ಮರೆಸುತ್ತದೆ ಎಂದೂ ವೈದ್ಯರು ಹೇಳಿಕೊಂಡರು.
‘ಅಮ್ಮಾ, ಡಾಕ್ಟರ್ ಕೆಲ್ಸ ಬಿಟ್ಟು ಬಿಡಮ್ಮಾ... ನೀನು ನಂಗೆ ಮನೇಲಿ ಇರಬೇಕಮ್ಮ’ ಎಂಬ ಮಗಳ ಬೇಡಿಕೆ, ‘ಅಪ್ಪ ನೀನು ಯಾಕೆ ಬೇರೆ ಅಪ್ಪಂದಿರAತೆ ಮನೇಲಿ ಇರೋದೇ ಇಲ್ಲ.. ಯಾವಾಗಲೂ ಹಾಸ್ಪಿಟಲ್‌ನಲ್ಲಿಯೇ ಇರ್ತೀಯಾ...’ ಎಂದು ಕೇಳುವ ಮಗನ ಪ್ರಶ್ನೆಗಳಿಗೆ ವೈದ್ಯರು ಏನೆಂದು ಉತ್ತರಿಸಿಯಾರು?
‘ನಮ್ಮನ್ನು ಸರಿಯಾಗಿ ಪರೀಕ್ಷೆ ಮಾಡಿದರೆ ಎಷ್ಟು ಸಲ ಕೊರೊನಾ ಸೋಂಕು ನಮಗೆ ತಗುಲಿ ಹೋಗಿದೆಯೋ.? ರೋಗವೇ ಬಾರಬಾರದು ಎನ್ನಲು ನಾವೇನೂ ಸೂಪರ್ ಮ್ಯಾನ್‌ಗಳಲ್ಲವಲ್ಲ ಎಂದು ಹೇಳಿದ ವೈದ್ಯರೋರ್ವರು ಸಾಲು ಸಾಲಾಗಿ ನರ್ಸ್ಗಳು ಕೂಡ ಸೋಂಕು ತಗುಲಿಸಿಕೊಂಡು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇರುವ ನರ್ಸ್ಗಳಿಗೇ ಹೆಚ್ಚುವರಿ ಹೊಣೆಯಿದೆ. ಹೀಗಿದ್ದರೂ ಕೊರೊನಾ ವಿರುದ್ಧದ ನಮ್ಮ ಸಮರ ಮುಂದುವರೆದೇ ಇದೆ ಎಂದರು ಕೊರೊನಾ ಸಮರ ಸೈನಿಕರೋರ್ವರು.
ದೇಶದ ಕೊವೀಡ್ ಆಸ್ಪತ್ರೆಗಳಲ್ಲಿ ಹಗಲಿರುಳೂ ವೈದ್ಯರು, ನರ್ಸ್ಗಳ ಕರ್ತವ್ಯ ಮುಂದುವರೆದೇ ಇದೆ. ಇವರು ಆಸ್ಪತ್ರೆಯ ಕಿಟಕಿಗಳಿಂದ ಹೊರ ನೋಡಿದಾಗ ಕಾಣುವ ಮದುವೆಗಳು, ಸಮಾರಂಭಗಳು, ಚುನಾವಣೆಗಳು.. ನಿಶ್ಚಿತಾರ್ಥಗಳು... ಜಾತ್ರೆಗಳು... ಹಬ್ಬಗಳು... ಮಾಸ್ಕ್ ಇಲ್ಲದೇ ತಿರುಗಾಡುವ ಜನರು... ಸಾಮಾಜಿಕ ಅಂತರ ಮರೆತಿರುವ ಬೇಜವಾಬ್ದಾರಿಯ ಜನರು... ಗುಂಪು ಗುಂಪಾಗಿ ಸೇರುತ್ತಲೇ ಕೊರೊನಾ ತಡೆಯುವುದು ಹೇಗೆಂದು ಸಲಹೆ ನೀಡುವ ಬುದ್ಧಿವಂತರು..(!)
- ಅನಿಲ್ ಎಚ್.ಟಿ.