ಸೋಮವಾರಪೇಟೆ,ಮೇ.೩: ಗ್ರಾಮೀಣ ಭಾಗಗಳಲ್ಲಿ ರೈತರು ಕಷ್ಟಪಟ್ಟು ಬೆಳೆದ ತರಕಾರಿ ಬೆಳೆಗೆ ಸೂಕ್ತ ಮಾರುಕಟ್ಟೆಯ ವ್ಯವಸ್ಥೆ ಇಲ್ಲದೆ ನಷ್ಟ ಅನುಭವಿಸುತ್ತಿದ್ದು, ವಾರದಲ್ಲಿ ಎರಡು ದಿನ ತರಕಾರಿ ಮಾರಾಟಕ್ಕೆ ರೈತರಿಗೆ ಅವಕಾಶ ನೀಡಬೇಕು ಎಂದು ಬಿಜೆಪಿ ರೈತಮೋರ್ಚಾದ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಂಬAಧಿತ ಮನವಿಯನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಸೇರಿದಂತೆ ತಹಶೀಲ್ದಾರ್ ಹಾಗೂ ಪ.ಪಂ. ಮುಖ್ಯಾಧಿಕಾರಿಗೆ ಸಲ್ಲಿಸಿದ ರೈತಮೋರ್ಚಾದ ಪದಾಧಿಕಾರಿಗಳು, ರೈತರು ಬೆಳೆಯುತ್ತಿರುವ ತರಕಾರಿ ಬೆಳೆ ಸಂಗ್ರಹಿಸಲು ಸೂಕ್ತ ವ್ಯವಸ್ಥೆ ಇಲ್ಲ. ಕಟಾವಿಗೆ ಬಂದ ತಕ್ಷಣ ಮಾರಬೇಕು. ಆದರೆ, ಈಗ ಕೋವಿಡ್ ೧೯ರ ಸೋಂಕು ಹೆಚ್ಚಳವಾದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ಹಿನ್ನೆಲೆ ತರಕಾರಿ ಮಾರಾಟಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.

ರಾಜ್ಯ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿರುವುದರಿಂದ ಖರೀದಿದಾರರು ತರಕಾರಿ ಕೊಳ್ಳಲು ಬರುತ್ತಿಲ್ಲ. ಬಂದ ಕೆಲವರು ಅತಿ ಕಡಿಮೆ ಬೆಲೆಗೆ ಕೊಂಡು, ಹೆಚ್ಚಿನ ಬೆಲೆಗೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ರೈತರಿಗೆ ಹೆಚ್ಚಿನ ನಷ್ಟವಾಗುತ್ತಿದೆ. ಅಧಿಕಾರಿಗಳು ತರಕಾರಿ ಮಾರಾಟ ಮಾಡಲು ಬಿಡುತ್ತಿಲ್ಲ. ಆದುದರಿಂದ ಪಟ್ಟಣದ ಹೈಟೆಕ್ ಮಾರುಕಟ್ಟೆ ಆವರಣದಲ್ಲಿ ಕೋವಿಡ್ ನಿಯಮಾನುಸಾರ ವಾರದಲ್ಲಿ ಎರಡು ದಿನಗಳ ಕಾಲ ತರಕಾರಿ ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಸಲ್ಲಿಸಿದರು.

ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಪ್ರದಾನ ಕಾರ್ಯದರ್ಶಿ ದಿನೇಶ್ ಕುಂದಳ್ಳಿ, ಕಾರ್ಯದರ್ಶಿ ಶ್ರೀಕಾಂತ್, ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಜಾ ಪೂಣಚ್ಚ, ರಾಜ್ಯ ಯುವ ಮೋರ್ಚಾದ ಮಹೇಶ್ ತಿಮ್ಮಯ್ಯ ಸೇರಿದಂತೆ ಇತರರು ಈ ಬಗ್ಗೆ ಗಮನ ಸೆಳೆದರು.