ತರುಣನೊಬ್ಬ ಕೋವಿಡ್ ಸೋಂಕಿತನಾಗಿ ಮನೆಯಲ್ಲಿ ಮೂರ್ಛೆ ಹೋಗುತ್ತಾನೆ. ಮನೆಯವರು ರಕ್ತ ಪರೀಕ್ಷೆ ಮಾಡಿಸುತ್ತಾರೆ. ಆತನಿಗೆ ಕೋವಿಡ್ ಸೋಂಕು ತಗಲಿರುತ್ತದೆ.

ಇಲ್ಲಿಂದ ಆಸ್ಪತ್ರೆ ಯಾತ್ರೆ ಆರಂಭ. ಆ ಆಸ್ಪತ್ರೆ, ಈ ಆಸ್ಪತ್ರೆ, ಹತ್ತಾರು ಆಸ್ಪತ್ರೆಗಳಲ್ಲೂ “ಬೆಡ್ ಇಲ್ಲ” ಎಂಬ ಯಾಂತ್ರಿಕ ಉತ್ತರ. ಮನೆಯವರು ಗೋಳಿಡುತ್ತಿದ್ದರೂ ಆಸ್ಪತ್ರೆ ಸಿಬ್ಬಂದಿಗೆ ಕೇಳುವ ತಾಳ್ಮೆಯಿಲ್ಲ. ಪುರುಸೊತ್ತ್ತೂ ಇಲ್ಲ. ಹಾಗೊ- ಹೀಗೋ ಒಂದೆಡೆ ಒಂದು ಹಾಸಿಗೆ ಇದೆ ಸೇರಿಸಿ ಎಂದಾಗ ಸ್ವರ್ಗದ ಬಾಗಿಲು ತೆಗೆದಷ್ಟು ಸಂತೋಷ. ಸೇರಿಸಿ ಹಲವು ಪರೀಕ್ಷೆ ಗಳಾಗುತ್ತಿದ್ದಂತೆಯೇ ತರುಣನ ಆಮ್ಲಜನಕ ಮಟ್ಟ ಕುಸಿಯಲಾರಂಭಿಸುತ್ತದೆ. ಮುಂದೆ ?

ಅವ್ರನ್ನ ಐ.ಸಿ.ಯು. ಗೆ ಹಾಕ್ಬೇಕು ನಮ್ಮಲ್ಲಿ ಬೆಡ್ ಇಲ್ಲ, ಬೇರೆಲ್ಲಾದ್ರೂ ನೋಡಿ, ಶಿಫ್ಟ್ ಮಾಡಿ ಎಂಬ ಮತ್ತೊಂದು ಭಾವರಹಿತ ಹೇಳಿಕೆ. ಅಯ್ಯೋ ದೇವ್ರೆ ಇನ್ನೆಲ್ಲಿ ಹುಡ್ಕೋದು. ಸರಿ ಆ ಮಿನಿಸ್ಟುç, ಈ ಎಂ.ಎಲ್.ಎ. ಮೂಲಕ ಶಿಫಾರಸು ಮಾಡ್ಸಿ ಒಂದೆರಡು ಆಸ್ಪತ್ರೆಗೆ ಫೋನಾಯಿಸಿದ ಬಳಿಕ ಹೋದರೆ ಮಿನಿಸ್ಟುç ಹದಿನೈದು ಜನ್ರಿಗೆ ಹೇಳಿದ್ದಾರೆ ನಾವೇನೂ ಮಾಡೋಕಾಗಲ್ಲ ಎಂಬ ಉತ್ತರ.

ಅಷ್ಟರಲ್ಲಿ ಮೊದಲ ಆಸ್ಪತ್ರೆಯ ತುರ್ತು ನಿಗಾ ಘಟಕದೊಳಗೆ ಇದ್ದವರಲ್ಲಿ ಮೂವರು ಇಹಲೋಕ ತ್ಯಜಿಸುತ್ತಾರೆ. ಸರಿ ನಿಮ್ಮ ಪೇಷಂಟ್ ಇಲ್ಲೇ ರ‍್ಲಿ ಎಂಬ ಉತ್ತರ. ಆಸ್ಪತ್ರೆಯೊಳಗೆ ರೋಗಿಯನ್ನು ನೋಡಿಕೊಳ್ಳಲು ಸೂಕ್ತ ಸಿಬ್ಬಂದಿ ಇಲ್ಲ. ನಿಮ್ಮ ಮನೆಯಿಂದಲೇ ಯಾರಾದ್ರೂ ರ‍್ಲಿ ಎಂಬ ಸಲಹೆ. ಪತಿಗೆ ಕೋವಿಡ್ ಆದರೆ ಶುಶ್ರೂಷೆಗೆ ಹುಷಾರಾಗಿರುವ ಪತ್ನಿಯೇ ಬರಬೇಕಾದ ಅನಿವಾರ್ಯತೆ. ಅಪಾಯ.

ಪತಿ-ಪತ್ನಿಯೆದುರು ಭವಿಷ್ಯವೇ ಕತ್ತಲಾದಂತೆ ಭಾಸವಾಗುತ್ತಿರುತ್ತದೆ. ಅಷ್ಟರಲ್ಲೇ ಪತ್ನಿಯ ತಾಯಿ ಮತ್ತೊಂದು ಆಸ್ಪತ್ರೆಯಲ್ಲಿ ಅಸುನೀಗಿದರು ಎಂಬ ಸುದ್ದಿ!

ಒಂದೊAದು ಉಸಿರಿಗೂ ಪ್ರಾಣ ಹಿಂಡಿ ಬಡಿದಾಡುತ್ತಿದ್ದ ಪತಿಯನ್ನು ಬಿಟ್ಟು ಪತ್ನಿ-ತಾಯಿಯ ಅಂತ್ಯ ಕ್ರಿಯೆಯ ಜವಾಬ್ದಾರಿ ನಿರ್ವಹಿಸಲು ಓಡುತ್ತಾಳೆ.

ಇಂದು ಬೆಂಗಳೂರಿನಲ್ಲಿ ಹಾಗೂ ಇತರ ಹಲವೆಡೆ ನಿತ್ಯ, ಪ್ರತಿ ಕ್ಷಣ ನಡೆಯುತ್ತಿರುವ ಹೃದಯ ವಿದ್ರಾವಕ ಪರಿಸ್ಥಿತಿ ಇದು. ಇದಕ್ಕಿಂತಲೂ ಬಿಗಡಾಯಿಸಿದ ಪರಿಸ್ಥಿತಿ, ಪುಟ್ಟ ಮಕ್ಕಳು ತಬ್ಬಲಿಗಳಾದ ಘಟನೆಗಳೂ ನಡೆಯುತ್ತಿವೆ.

ಎಲ್ಲವೂ ಸುಸೂತ್ರವಾಗಿ ಸಾಗುತ್ತಿದ್ದಾಗ, ಜೀವನ ಹೂಹಾದಿಯ ನಡಿಗೆ ಅನಿಸುತ್ತದೆ. ಒಂದಿಬ್ಬರ ಜೀವನದಲ್ಲಿ ಇಂತಹ ಘಟನೆ ಎದುರಾದಾಗ ಅಯ್ಯೋ ಪಾಪ ಎಂದಷ್ಟೇ ಹೇಳಿ ನಮ್ನಮ್ಮ ಕಾರ್ಯಗಳಲ್ಲಿ ಮತ್ತೆ ತೊಡಗುತ್ತೇವೆ.

ಇದೀಗ ದೇಶ ಪೂರ್ತಿ ಕೋವಿಡ್ ಭೀತಿ ಆವರಿಸಿದಾಗ, ನಾವು ನಿಂತ ನೆಲವೇ ಅಭದ್ರ ಎಂಬ ವಾಸ್ತವದ ಅರಿವಾದಾಗ ಜಂಗಾ ಬಲ ಉಡುಗಿ ದಂತಾಗುತ್ತದೆ. ಅಸಹಾಯಕತೆ ಎದುರಾಗುತ್ತದೆ. ಸಂಯಮ, ತಾಳ್ಮೆ ಮಾಯವಾಗುತ್ತದೆ. ಪ್ರೀತಿಸುತ್ತಿದ್ದ ಜೀವನ ಪ್ರಪಂಚ ಎಲ್ಲ ನಮ್ಮ ಸಹಾಯಕ್ಕೆ ಬರುತ್ತಿಲ್ಲ ಅನಿಸುತ್ತದೆ. ನಿರಾತಂಕವಾಗಿ ಆಸ್ಪತ್ರೆ, ವೈದ್ಯರು, ವ್ಯವಸ್ಥೆಯನ್ನು ದೂಷಿಸುತ್ತೇವೆ.

ವೈದ್ಯರೊಬ್ಬರ ಸಹೋದರನಿಗೂ ಬೆಂಗಳೂರಿನಲ್ಲಿ ಸೋಂಕು ತಗಲಿದೆ. ತುರ್ತು ನಿಗಾ ಕೋಣೆಯ ಹಾಸಿಗೆಗೆ ಅವರು ಪಟ್ಟ ಪಾಡೂ ಎಲ್ಲರಂತೆಯೆ. ಅವರೊಂದು ಮಾತು ಹೇಳಿದ್ದು ಸತ್ಯ. ಎಲ್ಲ ಹೇಳುತ್ತಾರೆ “ಕೊರೊನಾ ಬಂದರೆ ಹೆದರಬಾರದು, ಗಾಬರಿ ಆಗಬಾರದು” ಇತ್ಯಾದಿ. ಆದರೆ ಚಿಕಿತ್ಸೆಗೆ ಒಳಪಡಿಸಲು ಆಸ್ಪತ್ರೆಯೇ ಸಿಗುವದಿಲ್ಲ, ಹಾಸಿಗೆ, ಆಕ್ಸಿಜನ್, ಜೌಷಧವೇ ಅಲಭ್ಯ ಎನ್ನುವಷ್ಟು ಪರಿಸ್ಥಿತಿ ಬಿಗಡಾಯಿಸುವಾಗ, ಗಾಬರಿ ಆಗದಿರಲು ಸಾಧ್ಯವೇ? ಕೊರೊನಾಕ್ಕಿಂತ ಜನ ಗಾಬರಿ ಆಗುತ್ತಿರುವದು ಪರಿಸ್ಥಿತಿ, ಅವ್ಯವಸ್ಥೆಗಳ ಕುರಿತು ಎಂದು ವೈದ್ಯರು ಹೇಳಿದರು.

ತುರ್ತು ನಿಗಾ ಘಟಕದಲ್ಲಿ ಹಾಸಿಗೆ ಸಿಕ್ಕರೂ ಮತ್ತೂ ಒಂದು ಸಮಸ್ಯೆ ಕಾಡುತ್ತದೆ. ಘಟಕದೊಳಗೆ ಆಗಾಗ ಹೋಗುವಂತಿಲ್ಲ. ರೋಗಿಯ ಆರೋಗ್ಯದ ಬಗ್ಗೆ ಶೇಕಡಾ ೨೦, ಶೇಕಡಾ ೫೦, ಭರವಸೆ ನೀಡಬಹುದಷ್ಟೇ ಎಂದು ವೈದ್ಯರು ಹೇಳುತ್ತಿರುತ್ತಾರೆ. ಆದರೆ ರೋಗಿ ಎಲ್ಲರಿಗೂ ವಾಟ್ಸಪ್ ಸಂದೇಶ ಕಳುಹಿಸುತ್ತಾ ನಾನು ಆರಾಮಾವಾಗಿರುವೆ ಸಂಜೆ ಅಥವಾ ನಾಳೆ ಬಿಡುಗಡೆ ಮಾಡಬಹುದು ಎಂದು ಹೇಳುತ್ತಿರುತ್ತಾರೆ. ರಾತ್ರಿಯಾಗುತ್ತಿದ್ದಂತೆ ಆಸ್ಪತ್ರೆಯಿಂದ ಸಂದೇಶ ಬರುತ್ತದೆ. “ರೋಗಿ ಕಣ್ಮುಚ್ಚಿ ಬಿಟ್ಟರು ಬಂದು ಸಹಿ ಹಾಕಿ”!

ಈ ಪರಿಸ್ಥಿತಿಯಲ್ಲಿ ವೈದ್ಯರನ್ನು ಪೂರ್ತಿ ಧೂಷಿಸುವಂತಿಲ್ಲ. ಹಾಗೆಂದು ಎಲ್ಲ ಪ್ರಕರಣಗಳಿಗೂ ಸೂಕ್ತ ಚಿಕಿತ್ಸೆ ಒದಗುತ್ತಿದೆ ಎಂದೂ ಅಲ್ಲ. ಇದೀಗ ವೈದ್ಯರನ್ನು ಕಾಡುತ್ತಿರುವದು “ಹ್ಯಾಪಿ ಹೈಪೋಕ್ಸಿಯಾ” (ಊಚಿಠಿಠಿಥಿ ಊಥಿಠಿoxiಚಿ) ಎಂಬ ಸ್ಥಿತಿ. ಹೆಚ್ಚಿನ ಯುವ ರೋಗಿಗಳಲ್ಲಿ ಈ ಸ್ಥಿತಿ ಕಂಡು ಬಂದಿದೆ. ಆಮ್ಲಜನಕ ಮಟ್ಟ ಪೂರ್ತಿ ಇಳಿಯುತ್ತಿರುತ್ತದೆ. ಶ್ವಾಸಕೋಶ, ಮೂತ್ರಕೋಶ ಇತ್ಯಾದಿ ನಿಷ್ಕಿçಯಗೊಳ್ಳುವ ಪ್ರಕ್ರಿಯೆ ಆರಂಭವಾಗಿರುತ್ತದೆ. ಆದರೆ ಸೋಂಕಿತನಿಗೆ ಯಾವದೇ ನೋವಿನ ಉಸಿರಾಟದ ಅಡಚಣೆ ಗಮನಕ್ಕೆ ಬರುವದಿಲ್ಲ. ಜೊತೆಗೆ ಏನೋ ಉತ್ಸಾಹ-ಉಲ್ಲಾಸ ತುಂಬಿ ಬಂದAತಾಗಿ “ನಾನು ಚೆನ್ನಾಗಿರುವೆ” ಎಂದು ಇತರರೊಡನೆ ಹೇಳಿಕೊಳ್ಳಲು ಹಾತೊರೆಯುತ್ತಾರೆ. ಆದರೆ ಆಮ್ಲಜನಕ ಮಟ್ಟ ಮತ್ತೆ ಕುಸಿದಾಗ ಚಿಕಿತ್ಸೆಗೆ ಸ್ಪಂದಿಸುವ ಸಮಯ ವಿÆರಿರುತ್ತದೆ. ಅತ್ತ ರೋಗಿಯ ಕುಟುಂಬ ವೈದ್ಯರನ್ನು ದೂಷಿಸುತ್ತದೆ. ಒಟ್ಟಿನಲ್ಲಿ ಕೊರೊನಾ ಚಿಕಿತ್ಸೆಗೆ ಇದಮಿತ್ಥಂ ಎಂದು ನೇರ ಶುಶ್ರೂಷೆ ಇದ್ದಂತಿಲ್ಲ. ಯಾರೂ, ಯಾರನ್ನೂ ಉದ್ದೇಶಪೂರ್ವಕವಾಗಿ ಶುಶ್ರೂಷೆ ನೀಡದೆ ಸಾಯಲು ಬಿಡುವದಿಲ್ಲ. ಆದರೆ ಕೈ ವಿÆರಿರುವ ಪರಿಸ್ಥಿತಿಯ ವಾಸ್ತವ ಸತ್ಯದ ಅರಿವು ನಮಗಾಗಬೇಕು.

ಹಾಗಾಗಿ ಸೋಂಕಿಗೆ ಒಳಗಾಗದಂತೆ ತಂದುಕೊಳ್ಳಬೇಕಾದ ಅಗತ್ಯ ಶಿಸ್ತನ್ನು ಚಾಚೂ ತಪ್ಪದೆ ಪಾಲಿಸಬೇಕು. ಕೊರೊನಾ ಹೇಗೆ ಹಬ್ಬಿತು ಎಂಬ ಪ್ರಶ್ನೆ ಮುಂದೆ ಮಾಡಿಕೊಂಡು ಅವರಿವರನ್ನು ದೂಷಿಸಿ ಕಾಲ ದೂಡುವ ಬದಲು ತಾವುಗಳು ಭಾಗವಹಿಸುತ್ತಿರುವ ಹಬ್ಬಗಳು, ಮದುವೆಗಳು, ಆಟೋಟಗಳು, ಕೌಟುಂಬಿಕ ಆಚರಣೆಗಳಿಂದ ತತ್ಕಾಲ ದೂರವಿರಬೇಕು. ಪರಿಸ್ಥಿತಿಯಿಂದ ಕಂಗೆಡದೆ, ಜೀವನವನ್ನು ಎದುರಿಸಿ ಮುಂದಿನ ಪೀಳಿಗೆ ಗಳಿಗೆ ಮಾದರಿಯಾಗಬೇಕು.

ಜೀವನದ ಇಂತಹ ಬಿಕ್ಕಟ್ಟುಗಳನ್ನು ದೂರ ದೃಷ್ಠಿಯಿಂದ ನೋಡಿ ನಮ್ಮ ಪೂರ್ವಜರು ಸಾಕಷ್ಟು ಗ್ರಂಥಗಳನ್ನು ರಚಿಸಿದ್ದಾರೆ. ಶಂಕರಾಚಾರ್ಯರ “ಜಾಗೃತ ಪಂಚಕ” ದಲ್ಲಿ ಸುಂದರ ವಿವರಣೆ ಇದೆ. ಇಹಲೋಕ ತ್ಯಜಿಸುವಾಗ ತಾಯಿ ಬಾರರು, ತಂದೆ ಬಾರರು, ಪತಿ-ಪತ್ನಿ- ಬಂಧುಗಳು ಬಾರರು. ನೀನೊಬ್ಬನೇ ಮಾಡುವ ಪಯಣವದು.

ಹಾಗಾಗಿ ಬಂಧೂ ‘‘ತಸ್ಮಾತ್ ಜಾಗೃತ ಜಾಗೃತಃ’’ ಎಚ್ಚರ ವಹಿಸು ಎಂದು ಎಚ್ಚರಿಸುತ್ತಾರೆ ಶಂಕರರು.

ದೇಹ ಬಿಡಲು ಹೆದರುವದು ಮೂರ್ಖತನ. ಬದಲು ಹುಟ್ಟು-ಜೀವನ-ಸಾವಿನ ಕುರಿತು ಒಂದಷ್ಟು ಓದಿ, ಕೇಳಿ ಅರಿತರೆ ಕಣ್ಣು ಮುಚ್ಚುವಾಗ ನೆಮ್ಮದಿಯಿಂದ ತೆರಳಬಹುದು. ಕೊರೊನಾ ಹೊರತಾಗಿಯೂ ಸಾವು ಬಂದೇ ಬರುತ್ತದೆ. ಎದುರಿಸಲೇ ಬೇಕು ಎಂಬ ಸತ್ಯ ಅರಿತಿರಬೇಕು.

ಮಾತೆ ಒಬ್ಬಾಕೆ ಸಂದೇಶ ನೀಡುತ್ತಿದ್ದರು. ಇಂದು ಮಾನವನಿಗೆ ಈ ದುಸ್ಥಿತಿ, ನಾಶದ ಸ್ಥಿತಿ ಏಕೆ ಉದ್ಭವಿಸಿವೆ ಎಂದರೆ ಅವನು ಮಹಾಪ್ರಜ್ಞೆಯನ್ನು ಮರೆತ್ತಿದ್ದಾನೆ. ತಾನೇ ಸರ್ವಸ್ವ ಎಂದು ಬೀಗುತ್ತಿದ್ದಾನೆ. ಎಲ್ಲದಕ್ಕೂ ಒಂದು ಮೂಲ ಇರುತ್ತದೆ. ಮನಸ್ಸಿಗೆ ಆತ್ಮಕ್ಕೆ ಸಾವಿಲ್ಲ ಎನ್ನುತ್ತಾರೆ. ಬೆಂಕಿ, ನೀರು, ವಾಯು ಯಾವದರಿಂದಲೂ ಅದನ್ನು ನಾಶಮಾಡಲು ಸಾಧ್ಯವಿಲ್ಲ. ಹಾಗಿದ್ದರೆ ಸಾವು ದೇಹಕ್ಕೆ, ಮನಸ್ಸಿಗಲ್ಲ. ಆ ಮನಸ್ಸಿನ ಮೂಲ ಮಹಾಮನಸ್ಸು. ಮಹಾಮನಸ್ಸು ಎಲ್ಲರಲ್ಲೂ ಇರುತ್ತದೆ. ಅದರ ಅರಿವು, ಎಲ್ಲರೂ ಎಲ್ಲವೂ ಒಂದೇ ಎಂಬ ಭಾವ ದೂರ ಆಗುತ್ತಿರುವುದರಿಂದ ಪ್ರಾಪಂಚಿಕ ಲೋಲುಪತೆಯೇ ರ‍್ವಸ್ವ ಎಂದು ನಾವು ಭಾವಿಸುತ್ತಿರುವದರಿಂದ ಈ ಸಂಕಟ ಎದುರಾಗಿದೆ. ಬದಲು, ಶಂಕರರು ಹೇಳುವಂತೆ, ಮರುಳೇ ಸದಾ ಗೋವಿಂದನನ್ನು ಭಜಿಸು, ತೆರೆದ ಕಣ್ಣು ಶಾಶ್ವತವಾಗಿ ಮುಚ್ಚುವದರೊಳಗೆ ಗೋವಿಂದನನ್ನು ಭಜಿಸಿ ಜೀವನ ಪಾವನ ಮಾಡಿಕೋ.

?ಬಿ. ಜಿ. ಅನಂತಶಯನ,

ಸಲಹಾ ಸಂಪಾದಕ.