ಸೋಮವಾರಪೇಟೆ, ಮೇ ೨: ಪಟ್ಟಣದ ಬಸವೇಶ್ವರ ರಸ್ತೆ ನಿವಾಸಿ, ಹಿರಿಯ ಪತ್ರಿಕಾ ಛಾಯಾಗ್ರಾಹಕರೂ ಆಗಿದ್ದ ಬಾಲಾಜಿ ಸ್ಟುಡಿಯೋ ಮಾಲೀಕ ಎಸ್.ಎನ್. ನಾರಾಯಣ್ (ನಾಣಿ-೭೫) ಅವರು ತಾ.೧ ರಂದು ನಿಧನರಾದರು.

ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ನಾಣಿ ಅವರನ್ನು ಕಳೆದ ಏ.೨೪ರಂದು ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಈ ನಡುವೆ ಕೊರೊನಾ ವೈರಸ್ ಸೋಂಕು ತಗುಲಿದ್ದರಿಂದ ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೇ ತಾ.೧ರಂದು ನಿಧನರಾದರು.

ಮೃತರು ಪತ್ನಿ ಭಾನುಮತಿ ಸೇರಿದಂತೆ ಮೂವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಸೋಮವಾರಪೇಟೆ ಪಟ್ಟಣದಲ್ಲಿ ಕಳೆದ ೪ ದಶಕಗಳ ಕಾಲ ಸ್ಟುಡಿಯೋ ನಡೆಸುತ್ತಿದ್ದ ನಾಣಿ ಅವರು, ಪತ್ರಿಕಾ ಛಾಯಾಗ್ರಾಹಕರಾಗಿಯೂ ಸೇವೆ ಸಲ್ಲಿಸಿದ್ದರು.

ಟಿ.ವಿ. ಮತ್ತು ರೇಡಿಯೋ ಅಪರಿಚಿತವಾಗಿದ್ದ ಕಾಲದಲ್ಲಿ ತಮ್ಮ ಸ್ಟುಡಿಯೋದಲ್ಲಿದ್ದ ಟಿ.ವಿ.ಯಲ್ಲಿ ಬರುತ್ತಿದ್ದ ವಾರ್ತೆಯನ್ನು ಮೈಕ್ ಮೂಲಕ ಸಾರ್ವಜನಿಕರಿಗೆ ಕೇಳುವಂತೆ ವ್ಯವಸ್ಥೆ ಕಲ್ಪಿಸಿದ್ದ ನಾಣಿ ಅವರು, ಪುಷ್ಪಗಿರಿ ಛಾಯಾಗ್ರಾಹಕರ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ನಿರ್ದೇಶಕರಾಗಿ ಸುದೀರ್ಘ ಸೇವೆ ಸಲ್ಲಿಸಿ, ಸನ್ಮಾನಗಳಿಗೆ ಭಾಜನರಾಗಿದ್ದರು.

ಮಾಜಿ ಪ್ರಧಾನಿ ಇಂದಿರಾಗಾAಧಿ, ಬಿಜೆಪಿ ಮುಖಂಡ ಲಾಲ್‌ಕೃಷ್ಣ ಅಡ್ವಾಣಿ, ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಸೇರಿದಂತೆ ಇನ್ನಿತರ ರಾಜ್ಯ-ರಾಷ್ಟçಮಟ್ಟದ ನಾಯಕರ ಕಾರ್ಯಕ್ರಮಗಳ ಭಾವಚಿತ್ರವನ್ನು ತೆಗೆದು ಪತ್ರಿಕೆಗಳಿಗೆ ಕಳುಹಿಸಿದ್ದ ನಾಣಿ ಅವರ ನಿಧನಕ್ಕೆ ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ನಗರ ಕಾರ್ಯನಿರತ ಪತ್ರಕರ್ತರ ಸಂಘ, ಪತ್ರಿಕಾಭವನ ಟ್ರಸ್ಟ್ ಹಾಗೂ ಪುಷ್ಪಗಿರಿ ಛಾಯಾಗ್ರಾಹಕರ ಸಂಘ ಸಂತಾಪ ಸೂಚಿಸಿದೆ.