ಮಡಿಕೇರಿ, ಮೇ ೨: ಅತ್ಯಂತ ರೋಚಕ ಹಾಗೂ ಪ್ರತಿಷ್ಠೆಯ ಕರ್ನಾಟಕ ರಾಜ್ಯದ ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಕ್ಷೇತ್ರದ ಉಪಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ೨ ಕಡೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮತ್ತೊಂದು ಕಡೆ ಕಾಂಗ್ರೆಸ್ ಅಭ್ಯರ್ಥಿ ವಿಜಯಶಾಲಿ ಯಾಗಿದ್ದಾರೆ.

ಬೆಳಗಾವಿ ಲೋಕಸಭೆ ಉಪಚುನಾವಣೆ ನಡೆದ ಮತ ಎಣಿಕೆಯ ರೋಚಕ ಹಣಾಹಣಿಯಲ್ಲಿ ಬಿಜೆಪಿಯ ಮಂಗಳಾ ಅಂಗಡಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ವಿರುದ್ಧ ಗೆಲುವು ದಾಖಲಿಸಿದ್ದಾರೆ.

ಬೆಳಗಾವಿ ಸಂಸದರಾಗಿದ್ದ ಸುರೇಶ್ ಅಂಗಡಿ ನಿಧನ ಹಿನ್ನೆಲೆಯಲ್ಲಿ ಲೋಕಸಭೆಗೆ ಉಪಚುನಾವಣೆ ನಡೆದಿತ್ತು. ಬಿಜೆಪಿ ತನ್ನ ಅಭ್ಯರ್ಥಿಯಾಗಿ ಸುರೇಶ್ ಅಂಗಡಿ ಪತ್ನಿ ಮಂಗಳಾ ಅಂಗಡಿ ಅವರನ್ನು ಕಣಕ್ಕಿಳಿಸಿತ್ತು. ಇನ್ನು ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಿತ್ತು.

ಇಬ್ಬರ ನಡುವೆ ನಡೆದ ತೀವ್ರ ಹಣಾಹಣಿಯಲ್ಲಿ ಸತೀಶ್ ಜಾರಕಿಹೊಳಿ ಅವರು ಕೊನೆಯ ೭ ಸುತ್ತುಗಳ ಮತ ಎಣಿಕೆಯವರೆಗೂ ಮುನ್ನಡೆ ಸಾಧಿಸಿದ್ದರು. ಆದರೆ ನಂತರ ಮಂಗಳಾ ಅಂಗಡಿ ಅವರು ಮುನ್ನಡೆ ಸಾಧಿಸುವ ಮೂಲಕ ಗೆಲುವ ತಮ್ಮದಾಗಿಸಿಕೊಂಡಿದ್ದಾರೆ. ಮಂಗಳಾ ಅಂಗಡಿ ೪,೩೫,೨೦೨ ಮತಗಳನ್ನು ಪಡೆದರೆ, ಸತೀಶ್ ಜಾರಕಿಹೊಳಿ ೪,೩೨,೨೯೯ ಮತಗಳನ್ನು ಪಡೆದಿದ್ದಾರೆ.

ಮಸ್ಕಿಯಲ್ಲಿ ಕಾಂಗ್ರೆಸ್‌ಗೆ ಗೆಲುವು

ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ಗೆ ಸೋಲು ಕಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿಹಾಳ ೩೦ ಸಾವಿರಕ್ಕೂ ಹೆಚ್ಚು ಮತಗಳ ಅಂತರದಿAದ ಗೆಲುವು ಸಾಧಿಸಿದ್ದಾರೆ.

ಬಸನಗೌಡ ತುರುವಿಹಾಳ ೮೬,೨೨೨ ಮತಗಳನ್ನು ಪಡೆದಿದ್ದರೆ ಪ್ರತಾಪ್ ಗೌಡ ಪಾಟೀಲ್ ೫೫,೫೮೧ ಮತಗಳನ್ನು ಪಡೆದಿದ್ದು ಈ ಮೂಲಕ ಬಸನಗೌಡ ಬರೋಬ್ಬರಿ ೩೦, ೬೪೧ ಮತಗಳ ಅಂತರದಿAದ ಗೆಲುವು ಸಾಧಿಸಿದ್ದಾರೆ.

ಬಸವಕಲ್ಯಾಣದಲ್ಲಿ ಶರಣು ಗೆಲುವು

ಬಸವ ಕಲ್ಯಾಣ ಉಪಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ೧೫,೦೮೪ ಮತಗಳ ಅಂತರದಿAದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ದಿವಂಗತ ನಾರಾಯಣ್ ಅವರ ಪತ್ನಿ ಮಾಲ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಮತ ಎಣಿಕೆಯ ಮೊದಲ ಸುತ್ತಿನಿಂದಲೇ ಶರಣು ಮುನ್ನಡೆ ಕಾಯ್ದುಕೊಂಡಿದ್ದರು. ಶರಣು ಸಲಗರ ೫೫,೭೮೮, ಮಾಲ ೪೦,೭೦೪ ಮತಗಳನ್ನು ಪಡೆದುಕೊಂಡಿದ್ದಾರೆ.