ಭಾಗಮಂಡಲ, ಮೇ ೨: ಭಾಗಮಂಡಲ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಸ್ಥಳೀಯರು ಪ್ರತಿ ದಿನ ಸಮಸ್ಯೆಯನ್ನು ಎದುರಿಸುವಂತಾಗಿದೆ. ಚರಂಡಿ ಇಲ್ಲದೆ ಕೆಸರಿನಿಂದ ರಸ್ತೆಯು ಕಾಣದೆ ಜನರು ತೊಂದರೆಗೆ ಸಿಲುಕಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ಜನರಿಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ಸಮಯವನ್ನು ನಿಗದಿಗೊಳಿಸಲಾಗಿದ್ದು ಜನರು ಸಂಚರಿಸಲು ರಸ್ತೆ ವ್ಯವಸ್ಥೆ ಹಾಳಾಗಿದೆ. ಮೇಲ್ಸೇತುವೆ ಕಾಮಗಾರಿ ಜೊತೆಗೆ ಒಳ ಚರಂಡಿ ಕೆಲಸವೂ ಜನರಿಗೆ ಕಿರಿಕಿರಿಯನ್ನು ಉಂಟು ಮಾಡುತ್ತಿದೆ. ಮೂರುದಿನಗಳಿಂದ ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆಯಾಗುತಿದ್ದು, ಮಳೆಯಿಂದಾಗಿ ಅಂಗಡಿಗಳಿಗೆ ನೀರು ನುಗ್ಗಿ ಸಮಸ್ಯೆ ಉಂಟಾಗಿದೆ. ಮಳೆ ಬಂದಾಗ ರಸ್ತೆಗಳಲ್ಲಿ ಓಡಾಡುವ ಪರಿಸ್ಥಿತಿ ಇಲ್ಲ. ರಸ್ತೆ ಸಂಪೂರ್ಣ ಕೆಸರುಮಯವಾಗಿದೆ.
ದ್ವಿಚಕ್ರ ವಾಹನದಲ್ಲಿ ಸಂಚರಿಸುವವರು ಪರದಾಡುತಿದ್ದಾರೆ. ಮಹಿಳೆಯರು ದ್ವಿಚಕ್ರ ವಾಹನದಲ್ಲಿ ಓಡಾಡಲು ಸಾಧ್ಯವಾಗದೆ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಆಟೋದಲ್ಲಿ ಸಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮೇಲ್ಸೇತುವೆ ಕಾಮಗಾರಿಯನ್ನು ಒಂದೆಡೆ ಪೂರ್ಣ ಗೊಳಿಸಿ ನಂತರ ಇನ್ನೊಂದೆಡೆ ಶುರು ಮಾಡಿದರೆ ಸಮಸ್ಯೆಯಿಲ್ಲ. ಆದರೆ ವ್ಯವಸ್ಥಿತವಾಗಿ ಕೆಲಸ ನಿರ್ವಹಿಸದ ಕಾರಣ ಸಮಸ್ಯೆ ಉದ್ಭವಿಸುತ್ತಿದೆ ಎನ್ನುವುದು ಸ್ಥಳೀಯರ ಆರೋಪ.
ಮಳೆ ಸುರಿದ ಪರಿಣಾಮ ಅಂಗಡಿಗಳಿಗೆ ಕೆಸರು ನೀರು ನುಗ್ಗಿ ನಷ್ಟವುಂಟಾಗಿದೆ ಎಂದು ಅಂಗಡಿ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. -ಸುನಿಲ್