ಕೊರೊನಾ ಎಂಬ ಮಹಾಮಾರಿ ಇಡೀ ಜಗತ್ತನ್ನೇ ಆವರಿಸಿದೆ. ಇದರಿಂದ ನಮ್ಮ ದೇಶದ ಪ್ರತಿಯೊಂದು ಧಾರ್ಮಿಕ ಆಚರಣೆಗಳು, ಸಮಾರಂಭಗಳಾವುದು ನಡೆಯದೇ ಒಂದು ರೀತಿಯ ಸೂತಕದ ಛಾಯೆ ಆವರಿಸಿದೆ. ಕೊಡಗಿನಲ್ಲಿ ಪ್ರತಿ ಗ್ರಾಮಗಳಲ್ಲಿ ನಡೆಯುವ ಗ್ರಾಮ ದೇವರುಗಳ ವಾರ್ಷಿಕೋತ್ಸವಗಳು. ಮಾರ್ಚ್, ಏಪ್ರಿಲ್, ಮೇ ತಿಂಗಳು ಬಂತೆAದರೆ ಜಿಲ್ಲೆಯಲ್ಲಿ ಹಬ್ಬದ ಸಡಗರ. ದೂರದ ಊರುಗಳಲ್ಲಿ ನೆಲೆಸಿರುವ ಗ್ರಾಮದ ಜನ ಯಾವ ಸಮಾರಂಭಕ್ಕೆ ಹಾಜರಾಗದಿದ್ದರೂ ಗ್ರಾಮ ದೇವರ ಹಬ್ಬವೆಂದರೆ ಉತ್ಸಾಹದಿಂದ ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವರು. ನೆಂಟರಿಷ್ಟರು, ಗೆಳೆಯರೆಲ್ಲರೂ ಜೊತೆ ಸೇರಿ ತಮ್ಮ ಸುಖ ದುಃಖಗಳನ್ನು ಹಂಚಿಕೊಳ್ಳುತ್ತಾ, ನಗೆ ಚಟಾಕಿಗಳನ್ನು ಹರಿಸುತ್ತಾ, ಮಕ್ಕಳ ಓಡಾಟ ಕಲರವಗಳನ್ನು ನೋಡುತ್ತಾ ಕಳೆಯುವ ದಿನ ಎರಡು ವರ್ಷಗಳಿಂದ ಕಾಣದಂತಾಗಿದೆ. ಕೊಡಗಿನಲ್ಲಿರುವ ಹಲವಾರು ದೇವಾಲಯಗಳಲ್ಲಿ ಒಂದಾದAತಹ ಮರಗೋಡು ಶಿವ ಪಾರ್ವತಿ ದೇವಾಲಯ ಕಳೆದ ವರ್ಷವೂ ಕೂಡ ಕೊರೊನಾದಿಂದಾಗಿ ಹಬ್ಬದ ಸಡಗರ ಕಾಣದಿರುವಂತಾಯಿತು. ಈ ಬಾರಿ ಹಬ್ಬವನ್ನು ಆಚರಿಸಲು ಹಂಬಲಿಸುತ್ತಿದ್ದವರಿಗೆ ಕೊರೊನಾ ಪುನಃ ನೋವುಂಟುಮಾಡಿದೆ. ಹಬ್ಬದ ಕಟ್ಟುಬಿದ್ದು ಏ. ೩೦ ಹಾಗೂ ಮೇ ೧ ರಂದು ದೇವರ ಕೃಪೆಗೆ ಪಾತ್ರರಾಗಲು ಕಾಯುತ್ತಿದ್ದ ಭಕ್ತರಿಗೆ ನಿರಾಸೆಯುಂಟಾಗಿದೆ. ಕೊರೊನಾ ಮತ್ತೆ ತನ್ನ ೨ನೇ ಅಲೆ ಬೀಸಿರುವುದರಿಂದ ಜಿಲ್ಲೆಯ ಸಡಗರವನ್ನು ಕಿತ್ತುಕೊಂಡಿದೆ. ಏ. ೩೦ ಮತ್ತು ಮೇ ೧ ರಂದು ನಡೆಯುವ ದೇವರ ಉತ್ಸವವು ಅಂಬುಕಾಯಿ, ಎತ್ತುಪೋರಾಟ, ಕಾಯಿಗೆ ಗುಂಡು ಹೊಡೆಯುವುದು ಹೀಗೆ ಹಲವು ಕ್ರೀಡೆಗಳು ದೇವಾಲಯದಲ್ಲಿ ಹಾಗೂ ಪ್ರತಿ ಮನೆಗಳಲ್ಲೂ ಸಂಭ್ರಮದ ಕ್ಷಣಗಳನ್ನು ಹೊತ್ತು ತರುತ್ತಿತ್ತು. ಏ. ೩೦ ರಂದು ದೇವರು ಬಲಿ ಬಂದು ಅಂದಿನ ಹಬ್ಬ ಮುಕ್ತಾಯಗೊಂಡು, ಮೇ ೧ ರಂದು ದೊಡ್ಡ ಹಬ್ಬವು ನಡೆಯುವುದು. ಮಧ್ಯಾಹ್ನದ ಊಟದ ನಂತರ ದೇವರು ಬಲಿ ಬಂದು ಜಳಕಕ್ಕೆ ತೆರಳಿ ಆಗಮಿಸುವ ಶಿವ ಪಾರ್ವತಿ ದೇವರ ದರ್ಶನ ಪಡೆಯುವುದೇ ಭಾಗ್ಯ. ದೇವಾಲಯದ ಸುತ್ತ ಸುಮಾರು ೧೩ ಸುತ್ತು ಹಾಕುತ್ತಾ ಪ್ರತೀ ಸುತ್ತಿನಲ್ಲೂ ೧೩ ತರಹದ ನೃತ್ಯಗಳೊಂದಿಗೆ ಶಿವ ಪಾರ್ವತಿ ದೇವರ ಬಲಿ ನಡೆಯುತ್ತದೆ. ದೇವರ ಬಲಿ ಮುಗಿದ ನಂತರ ಊರಿನ ತಕ್ಕರುಗಳೆಲ್ಲರೂ ಸೇರಿ ದೇವರ ಮುಂದೆ ಕುಳಿತು, ದೇವರ ಆಶೀರ್ವಾದ ಪಡೆದು ಊರಿಗೆ ಮಳೆ, ಬೆಳೆ, ಜನರಿಗೆ ಆರೋಗ್ಯ ನೀಡಿ ಸರ್ವರಿಗೂ ಒಳಿತನ್ನು ಮಾಡು ಎಂದು ಬೇಡಿ ದೇವರ ಪ್ರಸಾದ ಸ್ವೀಕರಿಸಿ ಸರ್ವ ಭಕ್ತರು ಪುನೀತರಾಗುತ್ತಾರೆ. ಇದರ ಜೊತೆಯಲ್ಲಿ ದೇವರ ನೃತ್ಯಕ್ಕೆ ಬಾರಿಸುವ ಚಂಡೆಯ ಶಬ್ದ ಮನಸ್ಸಿನಲ್ಲಿ ಒಂದು ರೀತಿಯ ಅಹಲ್ಲಾದಕರ ಮೂಡಿಸಿ ಮನಸ್ಸಿನಲ್ಲಿರುವ ನೋವನ್ನೆಲ್ಲ ಮರೆಮಾಚುತ್ತದೆ. ಇದನ್ನೆಲ್ಲ ಕಣ್ತುಂಬಿಕೊಳ್ಳಲು ಭಕ್ತರು ಪ್ರತೀ ವರ್ಷವೂ ಹಂಬಲಿಸುತ್ತಲಿರುತ್ತಾರೆ.

ಆದರೆ ಈ ಎರಡು ವರ್ಷಗಳಿಂದ ದೇವಾಲಯದಲ್ಲಿ ಹಬ್ಬದ ಸಡಗರ ಕಾಣದೆ ಮೌನ ಆವರಿಸಿದೆ. ಇದು ಕೇವಲ ಶಿವ ಪಾರ್ವತಿ ದೇವಾಲಯ ಪರಿಸ್ಥಿತಿಯಲ್ಲ. ಜಿಲ್ಲೆಯ ಎಲ್ಲಾ ದೇವಾಲಯಗಳು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಕೆಲವು ದೇವಾಲಯಗಳಲ್ಲಿ ಈ ಬಾರಿ ಸೀಮಿತ ಜನರೊಂದಿಗೆ ಹಬ್ಬ ನಡೆದು ಭಕ್ತರು ಕೊಂಚ ಸಂತೃಪ್ತರಾಗಿದ್ದಾರೆ. ಈ ಸಂತೋಷದ ಕ್ಷಣಗಳನ್ನು ಕಾಣಲು ಕೊರೊನಾ ಎಂಬ ಕಾಯಿಲೆಯನ್ನು ಓಡಿಸಲೇಬೇಕಿದೆ. ಆದುದರಿಂದ ನಾವುಗಳು ದೇವರಲ್ಲಿ ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ಕಾಯಿಲೆಯಿಂದ ರಕ್ಷಿಸುವಂತೆ ಪ್ರಾರ್ಥಿಸಬೇಕಾಗಿದೆ. ಮಾನವ ಪ್ರಕೃತಿಗೆ ತೊಂದರೆ ನೀಡಿದರೆ ಪ್ರಕೃತಿಯು ಮಾನವನಿಗೆ ಪಾಠ ಕಲಿಸುವುದೆಂದರೆ ತಪ್ಪಾಗಲಾರದು.

ಆದ್ದರಿಂದ ಇನ್ನಾದರೂ ನಾವುಗಳು ಸರ್ಕಾರದ ಆದೇಶವನ್ನು ಪಾಲಿಸುತ್ತಾ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಆರೋಗ್ಯವನ್ನು ಕಾಪಾಡಿಕೊಂಡು ಕೊರೊನಾವನ್ನು ಹೋಗಲಾಡಿಸಬೇಕಿದೆ. ಈ ಮೂಲಕ ನಿಂತು ಹೋದ ದೇವರ ಉತ್ಸವಗಳು ಮರುಕಳಿಸಬೇಕಿದೆ.

- ಗಿರೀಶ್ ಪರಪ್ಪು