ಕುಶಾಲನಗರ, ಏ. ೩೦: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಬೇಕಿದ್ದ ೫೦ನೇ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ವಧು-ವರರ ಮನೆಗಳಲ್ಲೇ ನಡೆಸಲಾಯಿತು. ಕುಶಾಲನಗರದ ೨ ಕಡೆ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ಒಟ್ಟು ೪ ಕಡೆ ಸರಳ ವಿವಾಹ ನಡೆದಿದೆ.

ಶ್ರೀ ಕ್ಷೇತ್ರದ ಪ್ರತಿನಿಧಿಗಳ ಸಮ್ಮುಖದಲ್ಲಿ ವಧು-ವರರಿಗೆ ನಗದು ಉಡುಗೊರೆಯಾಗಿ ನೀಡಿ ಶುಭಹಾರೈಸಲಾಯಿತು.

ರಾಜ್ಯದ ಎಲ್ಲೆಡೆಯ ಒಟ್ಟು ೧೩೨ ಜೋಡಿಗಳ ವಿವಾಹಕ್ಕೆ ನೋಂದಣಿಯಾಗಿದ್ದು, ಕೋವಿಡ್-೧೯ ನಿಯಮ ಹಿನ್ನೆಲೆ ಶುಭದಿನವಾದ ಗುರುವಾರ ಗೋಧೂಳಿ ಲಗ್ನದಲ್ಲಿ ವಧು-ವರರ ಮನೆಗಳಲ್ಲಿ ಸರಳವಾಗಿ ಜರುಗಿತು. ಈ ಸಂದರ್ಭ ಈ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರತಿನಿಧಿಗಳು ಮದುವೆ ಮನೆಗಳಿಗೆ ತೆರಳಿ ಕ್ಷೇತ್ರದಿಂದ ನೀಡಲಾಗುವ ತಾಳಿ, ವಸ್ತç, ವಸ್ತುಗಳು ಸೇರಿದಂತೆ ನಗದು ಉಡುಗೊರೆಯಾಗಿ ನೀಡಿ ಶುಭಹಾರೈಸಿದರು. ಕೊಡಗು ಜಿಲ್ಲೆಯ ಕೊಡ್ಲಿಪೇಟೆ, ಕುಶಾಲನಗರ ವ್ಯಾಪ್ತಿಯಲ್ಲಿ ನಾಲ್ಕು ಜೋಡಿಗಳ ಮದುವೆ ಕಾರ್ಯಕ್ರಮ ಸರಳವಾಗಿ ಜರುಗಿತು ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ನಿರ್ದೇಶಕ ಡಾ. ಯೋಗೀಶ್ ಮಾಹಿತಿ ಒದಗಿಸಿದರು.

ಕುಶಾಲನಗರ ಮಾದಾಪಟ್ಟಣ ಗ್ರಾಮದಲ್ಲಿ ನಡೆದ ಸರಳ ವಿವಾಹ ಕಾರ್ಯಕ್ರಮದಲ್ಲಿ ಯೋಜನೆಯ ನಿರ್ದೇಶಕ ಡಾ. ಯೋಗೀಶ್, ಸೋಮವಾರಪೇಟೆ ಯೋಜನಾಧಿಕಾರಿ ಜಯಂತಿ, ಕುಶಾಲನಗರ ವಿಭಾಗದ ಮೇಲ್ವಿಚಾರಕಿ ಜಯಶ್ರೀ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಎಂ.ಎನ್. ಚಂದ್ರಮೋಹನ್, ಸ್ಥಳೀಯ ಪ್ರಮುಖರಾದ ಯಶೋಧ ಮತ್ತಿತರರು ಇದ್ದರು. - ಚಂದ್ರಮೋಹನ್