ಸೋಮವಾರಪೇಟೆ, ಏ. ೨೯: ಕೊರೊನಾ ಸೋಂಕು ತಡೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜಾರಿಯಲ್ಲಿರುವ ಎರಡನೆ ದಿನದ ಕರ್ಫ್ಯೂಗೆ ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ವ್ಯಾಪಕ ಸ್ಪಂದನೆ ದೊರೆತಿದೆ.

ಸರ್ಕಾರ ಸೂಚಿಸಿರುವ ಕೊರೊನಾ ನಿಯಮಗಳನ್ನು ಮೀರಿದ, ಹೋಟೆಲ್ ಮತ್ತು ಅಂಗಡಿ ಮಾಲೀಕರಿಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ, ಸರ್ಕಲ್‌ಇನ್ಸ್ಪೆಕ್ಟರ್ ಮಹೇಶ್ ಅವರುಗಳು ದಂಡ ವಿಧಿಸಿದರು. ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ಸ್ಥಳದಲ್ಲೇ ದಂಡ ವಿಧಿಸಲಾಯಿತು. ಆಸ್ಪತ್ರೆಗೆ ಚಿಕಿತ್ಸೆಗೆ ಬಂದವರು ಹಾಗೂ ಅವರ ವಾಹನಗಳ ಓಡಾಟ ಪಟ್ಟಣದಲ್ಲಿ ಕಂಡುಬAತು. ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಖಾಸಗಿ ಕ್ಲಿನಿಕ್‌ವೊಂದರ ಮುಂಭಾಗದ ರಸ್ತೆಯಲ್ಲಿ ರೋಗಿಗಳು ಸಾಲುಗಟ್ಟಿ ನಿಂತಿದ್ದರು.

ಪಿಕ್‌ಅಪ್‌ಗಳಲ್ಲಿ ಹೆಚ್ಚಿನ ಜನರು: ತೋಟ ಕೆಲಸಕ್ಕೆ ಕಾರ್ಮಿಕರನ್ನು ಕರೆದೊಯ್ಯುವ ಪಿಕ್‌ಅಪ್‌ಗಳಲ್ಲಿ ಹೆಚ್ಚಿನ ಕಾರ್ಮಿಕರು ತೆರಳುತ್ತಿದ್ದು, ಹಲವಷ್ಟು ಚಾಲಕರು ಮತ್ತು ಕಾರ್ಮಿಕರು ಮಾಸ್ಕ್ ಧರಿಸುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಗಮನಹರಿಸಬೇಕೆಂದು ಶಾಂತಳ್ಳಿ ವ್ಯಾಪ್ತಿಯ ಸಾರ್ವಜನಿಕರು ಆಗ್ರಹಿಸಿದ್ದಾರೆ. ಪಟ್ಟಣದ ಸುತ್ತಮುತ್ತಲ ಗ್ರಾಮೀಣ ಭಾಗದಿಂದ ಪಿಕ್‌ಅಪ್ ಮೂಲಕ ಶಾಂತಳ್ಳಿ, ತೋಳೂರುಶೆಟ್ಟಳ್ಳಿ ಮಾರ್ಗದಲ್ಲಿ ಕಾರ್ಮಿಕರನ್ನು ಕರೆದೊಯ್ಯಲಾಗುತ್ತಿದ್ದು, ಕೊರೊನಾ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ. ಇಂತಹ ಪಿಕ್‌ಅಪ್ ಚಾಲಕರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.