ಮಡಿಕೇರಿ, ಏ. ೨೯: ಕಳೆದ ವರ್ಷ ಇದೇ ಸಮಯದಲ್ಲಿ ಲಾಕ್‌ಡೌನ್, ಈ ಬಾರಿ ಕೊರೊನಾ ಕರ್ಫ್ಯೂ. ಹೆಚ್ಚಿನವರಿಗೆ ಈ ನಿರ್ಬಂಧಗಳು ಸುರಕ್ಷಿತರಾಗಿರಲು ಸರಕಾರವೇ ಮುಂದಿಟ್ಟಿರುವ ರಜದ ಸಮಯವಾದರೆ, ಆರೋಗ್ಯ ಕಾರ್ಯಕರ್ತರಿಗೆ ಇದು ‘ಓವರ್ ಡ್ಯೂಟಿಯ’ ಸಮಯ. ಕರ್ಫ್ಯೂವಿನ ಮಧ್ಯೆ, ಈ ಆರೋಗ್ಯ ಕಾರ್ಯಕರ್ತರು ಕೆಲಸಕ್ಕೆ ತೆರಳಬೇಕು. ಸಾರಿಗೆ ವ್ಯವಸ್ಥೆ ಇಲ್ಲದಿರುವ ಕಾರಣ ಅವರೇ ವಾಹನದ ವ್ಯವಸ್ಥೆ ಮಾಡಿಕೊಳ್ಳಬೇಕು. ಅಲ್ಲದೆ ಯಾವುದೇ ಅಂಗಡಿ ಅಥವಾ ಉಪಹಾರ ಕೇಂದ್ರಗಳು ತೆರೆಯದೆ ಇಲ್ಲದಿರುವುದರಿಂದ ಊಟದ ವ್ಯವಸ್ಥೆಯ ಬಗ್ಗೆಯೂ ಅವರು ಯೋಚಿಸಿರಬೇಕು. ಈ ಸಂಕಷ್ಟದ ಸಮಯದಲ್ಲಿ ಅನೇಕ ನಿವಾಸಿಗಳು ತಮ್ಮ ಪಾಲಿನ ಅಳಿಲು ಸೇವೆ ಮಾಡುತ್ತಿರುವುದು ಗಮನಾರ್ಹ.

ಮದೆನಾಡಿನಲ್ಲಿ ವಾಸವಿರುವ ಅಶೋಕ್ ಬಿ.ಎಸ್. ವೃತ್ತಿಯಲ್ಲಿ ಒಬ್ಬ ಜೀಪ್ ಡ್ರೆöÊವರ್. ಬ್ರಹ್ಮಶ್ರೀ ಅರ್ಥ್ ಮೂವರ್ಸ್ ಮೂಲಕ ನಿರ್ಮಾಣ ಕಾರ್ಯಗಳಲ್ಲೂ ಇವರು ಪಾಲ್ಗೊಳ್ಳುತ್ತಾರೆ. ಕೊರೊನಾ ಕರ್ಫ್ಯೂವಿನ ಈ ಸಮಯದಲ್ಲಿ ಇವರು ಈಗ ಒಬ್ಬ ವಿಭಿನ್ನ ಸ್ವಯಂ ಸೇವಕರಾಗಿ ರೂಪುಗೊಂಡಿದ್ದಾರೆ. ಇಂದಿನ ಈ ಸಾಂಕ್ರ‍್ರಾಮಿಕದ ಸಮಯದಲ್ಲಿ

(ಮೊದಲ ಪುಟದಿಂದ) ಆ್ಯಂಬ್ಯುಲೆನ್ಸ್ ಚಾಲಕರ ಪಾತ್ರ ಇತರ ಆರೋಗ್ಯ ಕಾರ್ಯಕರ್ತರ ಪಾತ್ರದಷ್ಟೇ ಮಹತ್ವ ಪೂರ್ಣವಾಗಿರುತ್ತದೆ. ಅನೇಕ ಬಾರಿ ಇವರು ಮಡಿಕೇರಿ ನಗರದಿಂದ ಇತರ ನಗರಗಳಿಗೆ ಆ್ಯಂಬ್ಯುಲೆನ್ಸ್ ಸೇವೆ ಒದಗಿಸುವ ಸನ್ನಿವೇಶ ತಲೆದೋರುತ್ತದೆ. ಕೊರೊನಾ ಕರ್ಫ್ಯೂವಿನ ಈ ಪರಿಸ್ಥಿತಿಯಲ್ಲಿ ಇವರಿಗೆ ಸಮಯಕ್ಕೆ ಸರಿಯಾಗಿ ಉಪಾಹಾರ ಲಭಿಸುವುದೂ ಕಷ್ಟವಾಗಿರುತ್ತದೆ. ಇದನ್ನರಿತ ಮದೆನಾಡಿನ ಅಶೋಕ್ ಬುಧವಾರದಿಂದ ಆ್ಯಂಬ್ಯುಲೆನ್ಸ್ ಚಾಲಕರಿಗೆ ಉಪಹಾರ ಸೇವೆಯನ್ನು ಉಚಿತವಾಗಿ ನೀಡಲು ಮುಂದೆ ಬಂದಿದ್ದಾರೆ.

‘ನಾನು ಕೂಡ ಬೆಂಗಳೂರಿನಲ್ಲಿ ಸುಮಾರು ೧೨ ವರ್ಷಗಳ ಕಾಲ ಆ್ಯಂಬ್ಯುಲೆನ್ಸ್ ಚಾಲಕನಾಗಿ ಕೆಲಸ ನಿರ್ವಹಿಸಿರುತ್ತೇನೆ. ಅವರ ಸಂಕಷ್ಟಗಳ ಅರಿವು ನನಗಿದೆ’ ಎಂದು ‘ಶಕ್ತಿ’ಯೊಂದಿಗೆ ಹಂಚಿಕೊಳ್ಳುವ ಅಶೋಕ್, ಸಹಾಯಹಸ್ತ ನೀಡುವ ನಿಟ್ಟಿನಲ್ಲಿ ಮನೆಯಲ್ಲಿಯೇ ಉಪಹಾರ ತಯಾರಿಸಿ ಆ್ಯಂಬ್ಯುಲೆನ್ಸ್ ಚಾಲಕರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಸುಮಾರು ಅರ್ಧ ಗಂಟೆ ಮುಂಚಿತವಾಗಿ ಚಾಲಕರು ಇವರಿಗೆ ಕರೆ ಮಾಡಿದ್ದಲ್ಲಿ, ಇವರು ರುಚಿಯಾದ ಸರಳ ಊಟ ಉಪಾಹಾರವನ್ನು ತಯಾರಿಸಿ, ಪ್ಯಾಕ್ ಮಾಡಿ ಮದೆನಾಡು ಜಂಕ್ಷನ್ ಹತ್ತಿರ ಬಂದು ಚಾಲಕರಿಗೆ ಹಸ್ತಾಂತರಿಸುತ್ತಾರೆ.

‘ಬೆಳಗ್ಗಿನ ಉಪಾಹಾರಕ್ಕೆ ದೋಸೆ ಹಾಗೂ ಇನ್ನಿತರ ತಿಂಡಿ ತಯಾರಿಸುತ್ತೇನೆ. ಭೋಜನಕ್ಕೆ ಸರಳವಾದ ಅನ್ನ-ಸಾರು, ಮೀನು ದೊರೆತರೆ ಅದನ್ನು ಉಪಯೋಗಿಸಿ ಊಟ ತಯಾರಿಸಿ, ಪ್ಯಾಕ್ ಮಾಡಿ ಮದೆನಾಡು ನಗರದ ಮುಖ್ಯ ರಸ್ತೆಗೆ ತಂದು ಚಾಲಕರಿಗೆ ಹಸ್ತಾಂತರಿಸುತ್ತೇನೆ’ ಎಂದು ಅಶೋಕ್ ವಿವರಿಸಿದರು. ಬುಧವಾರದಿಂದ ಈ ಸೇವೆಯನ್ನು ಅಶೋಕ್ ಪ್ರಾರಂಭಿಸಿದ್ದಾರೆ. ಮೊದಲ ದಿನದಂದು ಮೂರು ಆ್ಯಂಬ್ಯುಲೆನ್ಸ್ ಚಾಲಕರು ಈ ಸೇವೆಯನ್ನು ಪಡೆದುಕೊಂಡಿದ್ದಾರೆ. ವಾಟ್ಸಾö್ಯಪ್ ಮೂಲಕ ಈ ಸೇವೆಯ ಬಗ್ಗೆ ಪ್ರಚುರಪಡಿಸುತ್ತಿದ್ದು, ಆ್ಯಂಬ್ಯುಲೆನ್ಸ್ ಚಾಲಕರು ಈ ಸೇವೆಯನ್ನು ಪಡೆದುಕೊಳ್ಳಬಹುದೆಂದು ಅವರು ಕೋರಿದ್ದಾರೆ.

ಆ್ಯಂಬ್ಯುಲೆನ್ಸ್ ಚಾಲಕರು ಇವರ ಸೇವೆಯನ್ನು ಪಡೆಯಬೇಕಾದರೆ ೯೯೦೨೨೭೦೦೪೬ ಅಥವಾ ೯೪೮೩೦೬೯೬೨೧ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು.

- ಪ್ರಜ್ಞಾ ಜಿ.ಆರ್