ಶನಿವಾರಸಂತೆ, ಏ. ೨೮: ಸ್ಥಳೀಯ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷೆ ಸರೋಜಶೇಖರ್ ಅಧ್ಯಕ್ಷತೆಯಲ್ಲಿ ಕೊರೊನಾ ಜಾಗೃತಿ ಸಭೆ ನಡೆಯಿತು. ಸಭೆಯಲ್ಲಿ ಪಟ್ಟಣ ಹಾಗೂ ಹೋಬಳಿಯಾದ್ಯಂತ ಕೋವಿಡ್ -೧೯ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಸದಸ್ಯರು ಗಂಭೀರವಾಗಿ ಚರ್ಚಿಸಿದರು. ಸರರ್ಕಾರದ ಸುತ್ತೋಲೆ, ಮಾರ್ಗಸೂಚಿಗೆ ಸ್ಪಂದಿಸಿ ಪರಿಣಾಮಕಾರಿ ಕೆಲಸ ನಿರ್ವಹಿಸ ಬೇಕಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಸಾಗಿಸಲು ಕಾರ್ಡ್ ತೋರಿಸಿ ಪಡೆಯಬೇಕು, ಪಟ್ಟಣ ವ್ಯಾಪ್ತಿಯಲ್ಲಿ ಸ್ಯಾನಿಟೈಜರ್ ಸಿಂಪಡಣೆ, ಅಂಗಡಿಗಳ ಮುಂಭಾಗ ೩ ಅಡಿ ಅಂತರ ಕಾಪಾಡುವ ಚಿಹ್ನೆಗಳನ್ನು ಹಾಕುವುದು ತಪ್ಪಿದಲ್ಲಿ ವ್ಯಾಪಾರಿಗಳಿಗೆ ದಂಡ, ಹೊರಜಿಲ್ಲೆಯ ಆಸ್ಪತ್ರೆಗಳಿಗೆ ಹೋಗಲು ಪೊಲೀಸ್ ಇಲಾಖೆಯ ಅನುಮತಿ, ದಾಖಲೆ ಅಗತ್ಯ ಎಂದು ನಿರ್ಧರಿಸಲಾಯಿತು.
ಸದಸ್ಯ ಎಸ್.ಎನ್. ರಘು ಮಾತನಾಡಿ, ಕೋವಿಡ್ -೧೯ ಮಹಾಮಾರಿ ತಡೆಗಟ್ಟಲು ಪ್ರತಿಯೊಬ್ಬರು ಪಕ್ಷ, ಜಾತಿ, ಅಂತಸ್ತು ಬೇಧಭಾವ ಮರೆತು ಕೆಲಸ ಮಾಡಬೇಕು. ಸದಸ್ಯರ ಮುಂದಾಳತ್ವ ದಲ್ಲಿ ಕಾರ್ಯತಂತ್ರ ರೂಪಿಸಿ ಕೊರೊನಾ ಜಾಗೃತಿ ಮೂಡಿಸಬೇಕು. ಪಟ್ಟಣ ಪ್ರವೇಶ ದ್ವಾರದ ಬಳಿ ಚೆಕ್ ಪೋಸ್ಟ್ ಅಗತ್ಯವಾಗಿದ್ದು, ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಪಿಎಸ್ಐ ಎಚ್.ಈ. ದೇವರಾಜ್ ಮಾತನಾಡಿ, ಪಟ್ಟಣ, ಹೋಬಳಿ ಯಾದ್ಯಂತ ಗಸ್ತು ತಿರುಗಬೇಕಾಗಿದ್ದು, ಗ್ರಾಮಕ್ಕೆ, ಪಟ್ಟಣಕ್ಕೆ ಎಲ್ಲೆಡೆ ಓರ್ವ ಪೊಲೀಸ್ ಹಾಗೂ ಹೋಂಗಾರ್ಡ್ ನೇಮಿಸಿ ಶಿಸ್ತಿನ ಕ್ರಮಕೈಗೊಳ್ಳ ಲಾಗುವುದು. ಲಾಠಿ ಬಳಸಲೇಬೇ ಕಾಗಿದೆ ಒಂದೇ ಗಾಡಿಯಲ್ಲಿ ಸಾಮ ರ್ಥ್ಯಕ್ಕನುಗುಣವಾಗಿ ಕಾರ್ಮಿಕರನ್ನು ಕರೆದೊಯ್ದು ಕಟ್ಟಡ ಕೆಲಸ ಮಾಡಿಸಬೇಕು ಎಂದು ಸೂಚಿಸಿದರು. ಸದಸ್ಯ ಸರ್ದಾರ್ ಅಹಮ್ಮದ್ ಮಾತನಾಡಿ, ಪೊಲೀಸರು ಉತ್ತಮವಾಗಿ ಕಾರ್ಯನಿರ್ವ ಹಿಸುತ್ತಿದ್ದಾರೆ. ಟಾಸ್ಕ್ ಫೋರ್ಸ್ ರಚಿಸಿದರೆ, ಪಂಚಾಯಿತಿ ಸದಸ್ಯರು ಪೊಲೀಸರಿಗೆ ಸಹಕಾರ ನೀಡುತ್ತಾರೆ ಎಂದರು. ಉಪಾಧ್ಯಕ್ಷ ಎಸ್. ಆರ್. ಮಧು, ಸದಸ್ಯರಾದ ಎಸ್.ಸಿ. ಶರತ್ ಶೇಖರ್, ಆದಿತ್ಯಗೌಡ, ಗೀತಾಹರೀಶ್, ಫರ್ಜಾನಾ, ಕಾವೇರಿ, ಸರಸ್ವತಿ, ಪಿಡಿಒ ಬಿ.ಜೆ. ಮೇದಪ್ಪ, ಕಾರ್ಯದರ್ಶಿ ತಮ್ಮಯ್ಯಾಚಾರ್, ಬಿಲ್ ಸಂಗ್ರಾಹಕ ವಸಂತ್, ಎಎಸ್ಐ ಜಯಕುಮಾರ್, ಪಂಚಾಯಿತಿ ಸಿಬ್ಬಂದಿ ಫೌಝಿಯಾ, ಧರ್ಮರಾಜ್, ಆಶಾ ಕಾರ್ಯಕರ್ತೆ ಯರು ಉಪಸ್ಥಿತರಿದ್ದರು.