ಸೋಮವಾರಪೇಟೆ, ಏ. ೨೮: ನಿನ್ನೆ ದಿನ ಅಕಾಲಿಕವಾಗಿ ಮೃತಪಟ್ಟ ಸೋಮವಾರಪೇಟೆ ವಕೀಲರ ಸಂಘದ ಸದಸ್ಯರೂ ಆಗಿದ್ದ, ಕುಶಾಲನಗರ ವಕೀಲರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಬಿ. ನಂದಕುಮಾರ್ ಅವರ ನಿಧನಕ್ಕೆ ಸೋಮವಾರಪೇಟೆ ವಕೀಲರ ಸಂಘ ಸಂತಾಪ ಸೂಚಿಸಿತು.
ಆನ್ಲೈನ್ ಮೂಲಕ ನಡೆದ ವಕೀಲರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷ ಪದ್ಮನಾಭ್ ಸೇರಿದಂತೆ ಪದಾಧಿಕಾರಿಗಳು ಸಂತಾಪ ಸೂಚಿಸಿದರು. ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ವಕೀಲರು ಅಗತ್ಯವಾಗಿ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಪದ್ಮನಾಭ್ ಹೇಳಿದರು.
ಬಿಜೆಪಿ ಕಾನೂನು ಪ್ರಕೋಷ್ಠದ ಮಡಿಕೇರಿ ಕ್ಷೇತ್ರ ಉಪಾಧ್ಯಕ್ಷರೂ ಆಗಿದ್ದ ನಂದಕುಮಾರ್ ಅವರ ನಿಧನಕ್ಕೆ ಬಿಜೆಪಿ ಕಾನೂನು ಪ್ರಕೋಷ್ಠದ ಜಿಲ್ಲಾ ಸಂಚಾಲಕ ಅಭಿಮನ್ಯುಕುಮಾರ್ ಸಂತಾಪ ಸೂಚಿಸಿದ್ದಾರೆ.
ಕಂಬನಿ ಮಿಡಿದ ವಾಲ್ನೂರು
*ಸಿದ್ದಾಪುರ : ಕೋವಿಡ್ ನಿಂದ ಮೃತಪಟ್ಟ ವಕೀಲ ನಂದಕುಮಾರ್(೪೨) ಅವರ ಅಂತ್ಯಕ್ರಿಯೆ ಕುಶಾಲನಗರದ ಸೇವಾ ಭಾರತೀಯ ಸ್ವಯಂ ಸೇವಕರು ಇಂದು ವಾಲ್ನೂರು ಗ್ರಾಮದಲ್ಲಿ ನೆರವೇರಿಸಿದರು.
ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಗ್ರಾಮದ ಚಟುವಟಿಕೆಗಳಿಗೆ ಭಾಗಿಯಾಗುತ್ತ ಅತ್ಯಂತ ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಾ ಜನಮೆಚ್ಚುಗೆ ಗಳಿಸಿದ್ದ ನಂದಕುಮಾರ್ ಅವರ ಅಗಲಿಕೆಗೆ ಇಡೀ ಗ್ರಾಮವೇ ಕಂಬನಿ ಮಿಡಿಯಿತು. ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ವಯಂ ಸೇವಕರಾದ ಉಡ್ಲಿಕೊಪ್ಪ ಭರತ್ ಮಾಚಯ್ಯ, ನವನೀತ್ ಪೊನ್ನೇಟಿ, ರಾಜೀವ್, ಸಂದೀಪ್ ಹಾಗೂ ವಿನಿತ್ ಕುಶಾಲನಗರ ಅವರುಗಳು ಕೋವಿಡ್ ಮಾರ್ಗಸೂಚಿಯಂತೆ ಮೃತದೇಹಕ್ಕೆ ಅಗ್ನಿ ಸ್ಪಶÀð ಮಾಡಿದರು. ಗ್ರಾ.ಪಂ. ಹಾಗೂ ತಾಲೂಕು ಅಧಿಕಾರಿಗಳು ಈ ಸಂದರ್ಭ ಹಾಜರಿದ್ದರು.