ಮಡಿಕೇರಿ, ಏ. ೨೮: ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಕಾರ್ಮಿಕರೊಬ್ಬರು ದುರ್ಮರಣ ಗೊಂಡಿರುವ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ಶೆಟ್ಟಿಗೇರಿಯಲ್ಲಿ ಕಳೆದ ರಾತ್ರಿ ಸಂಭವಿಸಿದೆ.

ಅಲ್ಲಿನ ಮುಖ್ಯ ರಸ್ತೆಯಲ್ಲಿ ಅವಘಡ ಸಂಭವಿಸಿದ್ದು, ಕಾರ್ಮಿಕ ಜೇನು ಕುರುಬರ ಮನು (೩೨) ಎಂಬವರು ಮೃತಪಟ್ಟಿದ್ದಾರೆ. ಅಲ್ಲಿನ ಪೆಮ್ಮಂಡ ಅರಸು ಎಂಬವರ ಮನೆಯಲ್ಲಿ ಇವರು ಕಾರ್ಮಿಕರಾಗಿದ್ದರು. ರಾತ್ರಿ ಸುಮಾರು ೯ ರಿಂದ ೧೦ರ ವೇಳೆಯಲ್ಲಿ ಇವರ ಮನೆ ಎದುರಿನ ಮುಖ್ಯ ರಸ್ತೆಯಲ್ಲೇ ಯಾವದೋ ವಾಹನ ಇವರಿಗೆ ಡಿಕ್ಕಿಯಾಗಿದ್ದು, ವಾಹನ ಚಾಲಕ ನಿಲ್ಲಿಸದೆ ಪರಾರಿಯಾಗಿದ್ದಾನೆ. ಘಟನೆ ಬಗ್ಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಯತ್ನಿಸಲಾಗುತ್ತಿದೆ ಎಂದು ಎಸ್‌ಐ ರವಿಶಂಕರ್ ತಿಳಿಸಿದ್ದಾರೆ.