ವೀರಾಜಪೇಟೆ, ಏ. ೨೮: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯನ್ನು ಕೋವಿಡ್ ಹೆಲ್ತ್ಕೇರ್‌ಸೆಂಟರಾಗಿ ಪರಿವರ್ತನೆ ಮಾಡಲಾಗುವುದು. ಸಾರ್ವಜನಿಕರು ಹಾಗೂ ಇತರ ರೋಗಿಗಳಿಗೆ ಪ್ರವೇಶ ಇಲ್ಲ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೇಳಿದರು.

ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಇಂದು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲು ವೀರಾಜಪೇಟೆ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿ ಇದೆ. ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಇರುವ ಬೆಡ್‌ಗಳ ವ್ಯವಸ್ಥೆ ಇದ್ದು ಏಕಕಾಲದಲ್ಲಿ ೫೦ ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ. ಸೋಂಕಿತರ ಸಂಖ್ಯೆ ಇನ್ನು ಹೆಚ್ಚಾದರೆ ಉಳಿದ ಖಾಲಿ ಇರುವ ಹಾಸಿಗೆಗಳಿಗೂ ಆಕ್ಸಿಜನ್ ವ್ಯವಸ್ಥೆ ಮಾಡಲಾಗುವುದು. ತುರ್ತು ಸಂದರ್ಭ ಸೋಂಕಿತರನ್ನು ಮಡಿಕೇರಿ ಕೋವಿಡ್ ಸೆಂಟರ್‌ಗೆ ಸಾಗಿಸಲಾಗುವುದು. ಇಡೀ ಆಸ್ಪತ್ರೆಯ ಆವರಣವನ್ನು ಕೋವಿಡ್ ನಿಯಮಕ್ಕೆ ಅನುಸಾರವಾಗಿ ಪರಿವರ್ತನೆ ಮಾಡಲಾಗುತ್ತದೆ.

ಸಾಮಾನ್ಯ ರೋಗ ತಪಾಸಣೆ ಮಾಡಿಸಿಕೊಳ್ಳುವವರು ಗೋಣಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಕಾಕೋಟುಪರಂಬು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಳ್ಳಬಹುದು. ಅಪಘಾತ ಪ್ರಕರಣಗಳು ಕಂಡುಬAದರೆ ನೇರವಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ತೆರಳುವಂತೆ ಮಾಹಿತಿ ನೀಡಿದರು. ಅತೀ ತುರ್ತು ಪ್ರಕರಣಗಳು ಬಂದರೆ ಆ್ಯಂಬ್ಯೂಲೆನ್ಸ್ ಮೂಲಕ ಪ್ರಾಥಮಿಕ ಕೇಂದ್ರಗಳಿಗೆ ತೆರಳಲು ವ್ಯವಸ್ಥೆ ಮಾಡಲಾಗುವುದು. ಹೊರ ಜಿಲ್ಲೆ ಹಾಗೂ ರಾಜ್ಯದಿಂದ ಬಂದು ಪಟ್ಟಣದಲ್ಲಿ ಉಳಿದುಕೊಂಡರೆ ಅಂತವರನ್ನು ಗುರುತಿಸಿ ಮತ್ತೊಂದು ಬಾರಿ ತಪಾಸಣೆ ನಡೆಸುವಂತೆ ಪ.ಪಂ. ಮುಖ್ಯಾಧಿಕಾರಿ ಹೇಮಕುಮಾರ್ ಅವರಿಗೆ ಆದೇಶ ನೀಡಿದರು.

ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕದ ರೋಗಿಗಳಿಗೆ ಕೋವಿಡ್ ಸೋಂಕು ತಗುಲದಂತೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ಅವರಿಗೆ ಆದೇಶ ನೀಡಿದರು. ಈವರೆಗೆ ಸಾರ್ವಜನಿಕ ಆಸ್ಪತ್ರೆಯಲ್ಲಿದ್ದ ಕೋವಿಡ್ ಲಸಿಕಾ ಘಟಕವನ್ನು ಸಂತ ಅನ್ನಮ್ಮ ಶಾಲಾ ಆವರಣದಲ್ಲಿ ಆರಂಭಿಸಲಾಗುವುದು ಎಂದು ಹೇಳಿ ಸ್ಥಳ ಪರಿಶೀಲನೆ ನಡೆಸಿದರು. ಮೊರಾರ್ಜಿ ದೇಸಾಯಿ ಕೋವಿಡ್ ಕೇರ್ ಸೆಂಟರ್, ಚಿಕ್ಕಪೇಟೆಯ ನಿರ್ಬಂಧಿತ ವಲಯಕ್ಕೂ ಜಿಲ್ಲಾಧಿಕಾರಿ ಭೇಟಿ ನೀಡಿದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬನ್ವರ್‌ಸಿಂಗ್ ಮೀನಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್, ತಹಶೀಲ್ದಾರ್ ಯೋಗಾನಂದ್, ವೈದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹೇಮಕುಮಾರ್, ಕಂದಾಯ ಅಧಿಕಾರಿ ಹರೀಶ್ ಮತ್ತಿತರರು ಇದ್ದರು.

ಮಡಿಕೇರಿ: ಲಸಿಕಾ ಕೇಂದ್ರಕ್ಕೆ ಭೇಟಿ

ನಗರದ ಸಂತ ಮೈಕಲರ ಶಾಲೆಯಲ್ಲಿ ತೆರೆಯಲಾಗಿರುವ ಕೋವಿಡ್ ಲಸಿಕಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಪಂಚಾಯತ್ ಸಿಇಒ ಭನ್ವರ್ ಸಿಂಗ್ ಮೀನಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್, ವೈದ್ಯಾಧಿಕಾರಿಗಳು ಇತರರು ಇದ್ದರು.

*ಗೋಣಿಕೊಪ್ಪಲು: ಕೋವಿಡ್-೧೯ ಸಮಸ್ಯೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಯತಿರಾಜ್ ಮತ್ತು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗ್ರೀಷ್ಮ ಅವರೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿ, ಕೋವಿಡ್ ಲಸಿಕೆ ನೀಡಿಕೆ ಮತ್ತು ಆಸ್ಪತ್ರೆಯ ಇತರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡುವ ಸಂದರ್ಭದಲ್ಲಿ ವ್ಯಕ್ತಿಗತ ಅಂತರ ಕಾಪಾಡಿಕೊಂಡು ಯಾವುದೇ ಸಮಸ್ಯೆ ಸಂಭವಿಸದAತೆ ಎಚ್ಚರ ವಹಿಸಬೇಕು. ಲಸಿಕೆ ಕೊರತೆಯಾಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಲಸಿಕೆ ನೀಡುವ ಸಂದರ್ಭದಲ್ಲಿ ಸರಕಾರದ ಮಾರ್ಗ ಸೂಚಿಯನ್ನು ಅನುಸರಿಸುತ್ತಿರುವ ಬಗ್ಗೆ ಸೂಕ್ಷö್ಮವಾಗಿ ಗಮನಿಸಿದರು.

ತಾಲೂಕು ಆಡಳಿತಾಧಿಕಾರಿ ಡಾ. ಯತಿರಾಜ್ ಮಾಹಿತಿ ನೀಡಿ, ಪ್ರತಿ ದಿನ ೧೨೦ ರಿಂದ ೧೫೦ ಮಂದಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಬುಧವಾರ ೧೫೦ ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಹೇಳಿದರು.

ಸಿದ್ದಾಪುರ ಆರೋಗ್ಯ ಕೇಂದ್ರ ಪರಿಶೀಲನೆ

ಸಿದ್ದಾಪುರ: ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಭೇಟಿ ನೀಡಿ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಅಲ್ಲದೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಘವೇಂದ್ರ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.