ರಾಜ್ಯದಲ್ಲಿ ಕೊರೊನಾ ರಣಕೇಕೆ: ದಾಖಲೆಯ ೨೨೯ ಮಂದಿ ಬಲಿ

ಬೆಂಗಳೂರು, ಏ. ೨೮: ರಾಜ್ಯದಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು ಇಂದು ದಾಖಲೆಯ ೩೯,೦೪೭ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ ೧೪,೩೯,೮೨೨ಕ್ಕೆ ಏರಿಕೆಯಾಗಿದೆ. ಕಳೆದ ೨೪ ಗಂಟೆಯಲ್ಲಿ ರಾಜ್ಯದಲ್ಲಿ ಮರಣ ಮೃದಂಗ ಮುಂದುವರೆದಿದ್ದು, ಮಹಾಮಾರಿಗೆ ಒಂದೇ ದಿನ ಬರೋಬ್ಬರಿ ೨೨೯ ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ೧೫,೦೩೬ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ಇಂದು ೨೨,೫೯೬ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ ೭,೧೦,೩೪೭ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಸೋಂಕಿಗೆ ೧೩೭ ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಇಂದು ೧೧,೮೩೩ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿAದ ಚೇತರಿಸಿಕೊಂಡವರ ಸಂಖ್ಯೆ ೧೦,೯೫,೮೮೩ಕ್ಕೆ ಏರಿಕೆಯಾಗಿದೆ. ೩,೨೮,೮೮೪ ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ ೨,೧೯೨ ಮಂದಿ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಶೀಲ್ಡ್ ಬೆಲೆ ಕಡಿತಗೊಳಿಸಿದ ಸೆರಂ ಇನ್‌ಸ್ಟಿಟ್ಯೂಟ್

ನವದೆಹಲಿ, ಏ. ೨೮: ದೇಶದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಕೋವಿಡ್-೧೯ ಲಸಿಕೆ ತಯಾರಕಾ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ರಾಜ್ಯಗಳಿಗೆ ನೀಡುವ ತನ್ನ ಲಸಿಕೆಯ ಬೆಲೆಯನ್ನು ಬುಧವಾರ ಕಡಿತಗೊಳಿಸಿದೆ. ಸೆರಂ ಇನ್‌ಸ್ಟಿಟ್ಯೂಟ್ ಈ ಹಿಂದೆ ತಾನು ತಯಾರಿಸುವ ಕೋವಿಶೀಲ್ಡ್ ಲಸಿಕೆಯ ಪ್ರತಿ ಡೋಸ್‌ಗೆ ೪೦೦ ಬೆಲೆ ನಿಗದಿಪಡಿಸಿತ್ತು. ಆದರೆ ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತು ಕೇಂದ್ರ ಸರ್ಕಾರ ಸಹ ಬೆಲೆ ಕಡಿತಗೊಳಿಸುವಂತೆ ಕೇಳಿಕೊಂಡ ಹಿನ್ನೆಲೆ ಈಗ ರಾಜ್ಯಗಳಿಗೆ ಪ್ರತಿ ಡೋಸ್‌ಗೆ ೩೦೦ ರೂ.ಗೆ ಮಾರಾಟ ಮಾಡಲು ನಿರ್ಧರಿಸಿದೆ. ಈ ಸಂಬAಧ ಎಸ್‌ಐಐ ಸಿಇಒ ಆಧಾರ್ ಪೂನಾವಾಲ ಅವರು ಇಂದು ಟ್ವೀಟ್ ಮಾಡಿದ್ದು, ಸೆರಮ್ ಇನ್ಟ್ ಇಂಡಿಯಾ ಪರವಾಗಿ ಲೋಕೋಪಕಾರಿ ಸೂಚಕವಾಗಿ, ಈ ಮೂಲಕ ರಾಜ್ಯಗಳಿಗೆ ನೀಡುವ ಲಸಿಕೆಯ ಬೆಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ೪೦೦ ರಿಂದ ೩೦೦ ರೂ.ಗೆ ಇಳಿಸುತ್ತಿದ್ದೇವೆ ಎಂದು ಪ್ರಕಟಿಸಿದ್ದಾರೆ. ಈ ಬೆಲೆ ಕಡಿತ ರಾಜ್ಯಗಳಿಗೆ ಸಾವಿರಾರು ಕೋಟಿ ರೂಪಾಯಿ ಉಳಿಸುತ್ತದೆ. ಇದು ವ್ಯಾಕ್ಸಿನೇಷನ್ ಅನ್ನು ಮತ್ತಷ್ಟು ಶಕ್ತಗೊಳಿಸುತ್ತದೆ ಮತ್ತು ಅಸಂಖ್ಯಾತ ಜೀವಗಳನ್ನು ಉಳಿಸುತ್ತದೆ ಎಂದು ಪೂನಾವಾಲ ಹೇಳಿದ್ದಾರೆ.

ಕೋವಿಡ್ ಉಲ್ಬಣ: ಕಾವೇರಿ ನದಿಯಲ್ಲಿ ಚಿತಾಭಸ್ಮ ಬಿಡುವುದಕ್ಕೆ ನಿಷೇಧ

ಶ್ರೀರಂಗಪಟ್ಟಣ, ಏ. ೨೮: ಕಾವೇರಿ ನದಿಯಲ್ಲಿ ಮೃತಪಟ್ಟವರ ಚಿತಾಭಸ್ಮ ಹಾಗೂ ಇನ್ನಿತರ ವಸ್ತುಗಳನ್ನು ಬಿಡುವುದಕ್ಕೆ ರಾಜ್ಯ ಸರ್ಕಾರ ನಿಷೇಧ ವಿಧಿಸಿದೆ. ಕೋವಿಡ್‌ನಿಂದಾಗಿ ಸಾವುಗಳು ಹೆಚ್ಚಾಗುತ್ತಿದ್ದಂತೆ, ಶ್ರೀರಂಗಪಟ್ಟಣದ ಪ್ರಸಿದ್ಧ ಪಶ್ಚಿಮವಾಹಿನಿ ಮತ್ತಿತರೆಡೆಗಳಲ್ಲಿ ಮೃತರ ಚಿತಾಭಸ್ಮವನ್ನು ಬಿಡಲು ಭಾರೀ ಸಂಖ್ಯೆಯಲ್ಲಿ ಜನ ಸೇರುತ್ತಿರುವುದನ್ನು ಗಮನಿಸಿ ಈ ಆದೇಶ ನೀಡಲಾಗಿದೆ. ಕೋವಿಡ್-೧೯ ರ ಹರಡುವಿಕೆಯ ಬಗ್ಗೆ ಸ್ಥಳೀಯರು ಭಯ ವ್ಯಕ್ತಪಡಿಸಿದ್ದರಿಂದ ರಾಜ್ಯ ಮತ್ತು ನೆರೆ ಜಿಲ್ಲೆ, ನೆರೆ ರಾಜ್ಯಗಳ ಜನ ಕಾವೇರಿಯಲ್ಲಿ ಚಿತಾಭಸ್ಮವನ್ನು ಬಿಡುವುದಕ್ಕೆ ತಾಲೂಕು ಆಡಳಿತವು ನಿಷೇಧ ಹೇರಿದೆ. ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ತಹಶೀಲ್ದಾರ್ ಎಂ.ವಿ. ರೂಪಾ ತಿಳಿಸಿದ್ದಾರೆ. ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.