ಕುಶಾಲನಗರ, ಏ. ೨೭: ಕುಶಾಲನಗರದಲ್ಲಿ ವಾರದ ಸಂತೆ ರದ್ದಾಗಿದ್ದರೂ ಕೆಲವು ವ್ಯಾಪಾರಿ ಗಳಿಂದ ಹೆದ್ದಾರಿ ರಸ್ತೆ ಬದಿಯಲ್ಲಿ ಸಂತೆ ನಡೆಯಿತು.

ಸರ್ಕಾರದ ಕಟ್ಟುನಿಟ್ಟಿನ ಆದೇಶದ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಕೃಷಿ ಮಾರುಕಟ್ಟೆ ಆವರಣ ಬಂದ್ ಮಾಡಲಾಗಿತ್ತು. ಸಂತೆ ಆವರಣ ಹೊರಗೆ ಕೆಲವು ವ್ಯಾಪಾರಿಗಳು ಹೆದ್ದಾರಿ ಬದಿಯಲ್ಲಿ ಬೆಳಗಿನಿಂದಲೇ ಸಂತೆ ನಡೆಸಿದ ದೃಶ್ಯ ಕಂಡುಬAತು.

ಯಾವುದೇ ಅನುಮತಿ ಪಡೆಯದೆ, ನೆರೆಯ ಗ್ರಾಮಗಳ ಕೆಲವು ಸಂತೆ ವ್ಯಾಪಾರಿಗಳು ಪಟ್ಟಣದ ಆರ್‌ಎಂಸಿ ಎದುರಿನ ಹೆದ್ದಾರಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಸಂದರ್ಭ ಪ.ಪಂ. ಅಧಿಕಾರಿಗಳ ಸೂಚನೆಗೂ ಸ್ಪಂದನೆ ನೀಡಿಲ್ಲ. ನಂತರ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ ಬೆನ್ನಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು.

ರಾಜ್ಯದ ಎಲ್ಲೆಡೆ ವಾರಾಂತ್ಯದ ಕರ್ಫ್ಯೂ ಸೇರಿದಂತೆ ಕೊರೊನಾ ಸೋಂಕು ತಡೆಯಲು ಕಟ್ಟುನಿಟ್ಟಿನ ಸೂಚನೆಗಳು ಹೊರಡಿಸಿದ್ದರೂ, ಕೆಲವು ವ್ಯಾಪಾರಿಗಳು ನಿರ್ಲಕ್ಷö್ಯ ತೋರಿ ವ್ಯಾಪಾರ ಮಾಡುತ್ತಿದ್ದರು. ಈ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಸಂತೆ ವ್ಯಾಪಾರಕ್ಕೆ ಮುಗಿಬೀಳುತ್ತಿದ್ದ ವೇಳೆ ಕುಶಾಲನಗರ ಪಟ್ಟಣ ಪಂಚಾಯತಿ ಅಧಿಕಾರಿ ಕೃಷ್ಣಪ್ರಸಾದ್ ಸಿಬ್ಬಂದಿಗಳ ಮೂಲಕ ತೆರವುಗೊಳಿಸಲು ಸೂಚನೆ ನೀಡಿದರು. ಅಧಿಕಾರಿಗಳು ಪೊಲೀಸರ ಸಹಕಾರ ದಿಂದ ಸಂಪೂರ್ಣ ವ್ಯಾಪಾರಿಗಳನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾದರು. ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್, ಠಾಣಾಧಿಕಾರಿ ಗಣೇಶ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕ್ರಮ ಕೈಗೊಂಡರು.