*ಗೋಣಿಕೊಪ್ಪ, ಏ. ೨೬: ನೀರಿನ ಪೈಪು ದುರಸ್ತಿಗೊಂಡ ಕಾರಣ ಗ್ರಾಮಸ್ಥರಿಗೆ ನೀರಿನ ಅಭಾವ ಕಾಡುತ್ತಿರುವುದನ್ನು ಮನಗಂಡು ಗ್ರಾ.ಪಂ. ಸದಸ್ಯರೊಬ್ಬರು ತಾವೇ ಸ್ವತಃ ಕಾಳಜಿಯಿಂದ ಪೈಪ್‌ಲೈನ್ ಚರಂಡಿ ಸರಿಪಡಿಸಿ ನೀರಿನ ಸಮಸ್ಯೆಯನ್ನು ಬಗೆಹರಿಸಿ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಹಾತೂರು ಗ್ರಾಮ ಪಂಚಾಯಿತಿ ಸದಸ್ಯ ಸುಭಾಷ್ ಮ್ಯಾಥ್ಯು ಇವರ ಕಾರ್ಯ ಗ್ರಾಮಸ್ಥರ ವ್ಯಾಪಕ ಶ್ಲಾಘನೆಗೆ ಕಾರಣವಾಗಿದೆ. ಕಳೆದ ಒಂದು ವಾರದಿಂದ ಅತ್ತೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬAದಿತ್ತು. ಪ್ರತಿ ಮನೆಗೂ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಲೈನ್ ದುರಸ್ತಿಗೊಂಡ ಕಾರಣ ನೀರಿನ ಅಭಾವ ಎದುರಾಯಿತು. ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುವ ನೀರುಗಂಟಿ ಅನಾರೋಗ್ಯದ ಕಾರಣ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ನೀರುಗಂಟಿ ಬರುವವರೆಗೆ ಗ್ರಾಮಸ್ಥರಿಗೆ ನೀರು ಒದಗಿಸಲು ಸಾಧ್ಯವಾಗಿರಲಿಲ.್ಲ ಇದನ್ನು ಮನಗಂಡ ಸದಸ್ಯ ಸುಭಾಷ್ ಮ್ಯಾಥ್ಯೂ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ನೀರಿನ ಸಮಸ್ಯೆ ನೀಗಿಸಲು ತಾವೇ ಸ್ವತಃ ಗುದ್ದಲಿ, ಪಿಕಾಸಿ ಹಿಡಿದು ತಮ್ಮ ಸ್ನೇಹಿತ ಸುದೀಪ್ ಅವರ ಸಹಕಾರದೊಂದಿಗೆ ನೆಲವನ್ನು ಅಗೆದು ಒಡೆದು ಹೋಗಿದ್ದ ಪೈಪುಗಳನ್ನು ಸರಿಪಡಿಸಿ ಗ್ರಾಮಸ್ಥರಿಗೆ ನೀರುಣಿಸಿ ಭಗೀರಥರಾಗಿ ಮೆರೆದಿದ್ದಾರೆ.