ಸೋಮವಾರಪೇಟೆ, ಏ. ೨೫: ಜಿಲ್ಲಾಧಿಕಾರಿಗಳ ಆದೇಶದಂತೆ ಮೂರೂ ತಾಲೂಕುಗಳಲ್ಲಿ ಕೋವಿಡ್-೧೯ ಆರೋಗ್ಯ ಸಹಾಯವಾಣಿ ಕೇಂದ್ರ ತೆರೆಯಲಾಗಿದ್ದು, ಸೋಮವಾರಪೇಟೆಯಲ್ಲಿರುವ ಸಹಾಯವಾಣಿ ಕೇಂದ್ರಕ್ಕೆ ನಿಯೋಜನೆಗೊಂಡಿರುವ ಕೆಲ ಅಧಿಕಾರಿಗಳು ಚಕ್ಕರ್ ಹಾಕುತ್ತಿದ್ದಾರೆ.
ತಾ. ೨೪ ರಿಂದಲೇ ಸಹಾಯವಾಣಿ ಕೇಂದ್ರಗಳು ಪ್ರಾರಂಭವಾಗಿದ್ದು, ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಹಳೆಯ ಕಚೇರಿಯಲ್ಲಿ ಕೋವಿಡ್-೧೯ ಆರೋಗ್ಯ ಸಹಾಯವಾಣಿ ತೆರೆಯಲಾಗಿದೆ. ಈ ಸಹಾಯವಾಣಿ ಕೇಂದ್ರದಲ್ಲಿ ಇಂದು ಮಧ್ಯಾಹ್ನ ೨ ಗಂಟೆಯಿAದ ರಾತ್ರಿ ೧೦ ಗಂಟೆಯವರೆಗಿನ ಅವಧಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಮೂವರು ಸಿಬ್ಬಂದಿಗಳಲ್ಲಿ ಈರ್ವರು ಸಿಬ್ಬಂದಿಗಳು ಮಾತ್ರ ಹಾಜರಾಗಿದ್ದಾರೆ.
ಕಾಜೂರು ವ್ಯಾಪ್ತಿಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯೋರ್ವರನ್ನು ಸಹಾಯವಾಣಿ ಕೆಲಸಕ್ಕೆ ನಿಯೋಜಿಸಿದ್ದರೂ ಸಹ, ಅವರು ಕರ್ತವ್ಯಕ್ಕೆ ಹಾಜರಾಗಿಲ್ಲ. ಈ ಬಗ್ಗೆ ಉಳಿದ ಸಿಬ್ಬಂದಿಗಳನ್ನು ವಿಚಾರಿಸಿ ದರೆ ಮೇಲಧಿಕಾರಿಗಳಿಗೆ ವರದಿ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರತಿ ಪಾಳಿಯಲ್ಲಿ ಮೂವರು ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ನಿಯೋಜಿತ ಸಿಬ್ಬಂದಿ ತುರ್ತು ಕಾರ್ಯನಿಮಿತ್ತ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗದಿದ್ದರೆ, ಬದಲಿ ಸಿಬ್ಬಂದಿಯನ್ನು ನಿಯೋಜಿಸಿ ಮೇಲಧಿಕಾರಿಗಳಿಗೆ ವರದಿ ನೀಡುತ್ತಿದ್ದಾರೆ. ಆದರೆ ಇಂದು ಮಧ್ಯಾಹ್ನದ ನಂತರದ ಪಾಳಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಶಿಕ್ಷಣ ಇಲಾಖೆಯ ಸಿಬ್ಬಂದಿ ಇತ್ತ ಕರ್ತವ್ಯಕ್ಕೂ ಹಾಜರಾಗಿಲ್ಲ; ಅತ್ತ ಬದಲಿ ಸಿಬ್ಬಂದಿಯನ್ನೂ ಕಳುಹಿಸಿಲ್ಲ.
ಈ ಬಗ್ಗೆ ಉಳಿದ ಸಿಬ್ಬಂದಿಗಳನ್ನು ವಿಚಾರಿಸಿದರೆ, ನಿಯೋಜಿತ ಸಿಬ್ಬಂದಿ-ನೋಡಲ್ ಅಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿಗೆ ಗೈರು ಹಾಜರಾಗುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.