*ಸಿದ್ದಾಪುರ, ಏ. ೨೫: ಕಳೆದ ಮಳೆಗಾಲದಲ್ಲಿ ಕುಸಿತಕ್ಕೊಳಗಾಗಿದ್ದ ಅಬ್ಯಾಲ ರಸ್ತೆಯ ತಡೆಗೋಡೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ಕತ್ತಲೆಕಾಡು - ಅಬ್ಯಾಲ ರಸ್ತೆ ಭಾಗದ ತಡೆಗೋಡೆ ನಿರ್ಮಾಣಕ್ಕಾಗಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಮೂಲಕ ರೂ. ೧೭ ಕೋಟಿ ಬಿಡುಗಡೆ ಮಾಡಲಾಗಿತ್ತು. ಮಳೆಗಾಲದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಅಬ್ಯಾಲ ಬಳಿ ಯಂತ್ರಗಳನ್ನು ಬಳಸಿ ಸುಮಾರು ೬೦ ಅಡಿ ಎತ್ತರದ ತಡೆಗೋಡೆ ನಿರ್ಮಾಣ ಕಾರ್ಯ ಚುರುಕುಗೊಳಿಸಲಾಗಿದೆ. ಭಾರೀ ಮಳೆಯಿಂದಾಗಿ ರಸ್ತೆ ಕುಸಿದು ಅಪಾಯದ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ಇಕ್ಕಟ್ಟಿನ ರಸ್ತೆಯಲ್ಲಿ ವಾಹನಗಳ ಸಂಚಾರ ದುಸ್ತರವಾಗಿತ್ತು.
ಇದೀಗ ತಡೆಗೋಡೆ ನಿರ್ಮಾಣ ಕಾರ್ಯ ಪೂರ್ಣಗೊಂಡರೆ ರಸ್ತೆ ವಿಸ್ತಾರವಾಗಲಿದ್ದು, ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ. ತಡೆಗೋಡೆ ಕಾಮಗಾರಿಯನ್ನು ಗುತ್ತಿಗೆದಾರ ಬಷೀರ್ ಕೈಗೆತ್ತಿಕೊಂಡಿದ್ದಾರೆ.