ಗೋಣಿಕೊಪ್ಪಲು, ಏ. ೨೫: ಕಾಡಾನೆ ಹಾಡಿಯಲ್ಲಿರುವ ಮನೆಗಳಿಗೆ ದಾಳಿ ನಡೆಸಿ ಕಿಟಕಿ ಹಾಗೂ ಬಾಗಿಲನ್ನು ಮುರಿದು ಹಾನಿ ಮಾಡಿದ ಘಟನೆ ತಿತಿಮತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೇಷ್ಮೆ ಹಡ್ಲುವಿನ ಹೊಸಕೆರೆ ಗಿರಿಜನ ಹಾಡಿಯಲ್ಲಿ ನಡೆದಿದೆ.
ತಾ. ೨೪ರ ನಡು ರಾತ್ರಿಯ ವೇಳೆ ಹಾಡಿಯ ನಿವಾಸಿ ಯರವರ ರಾಜಣ್ಣ ಹಾಗೂ ಚಾತ ಎಂಬುವರ ಮನೆಯ ಬಳಿ ಆಗಮಿಸಿದ ಕಾಡಾನೆ ಮನೆಯ ಬಾಗಿಲು ಹಾಗೂ ಕಿಟಕಿಯನ್ನು ಮುರಿದು, ಹೊರ ಭಾಗದಲ್ಲಿ ಇದ್ದ ವಸ್ತುಗಳನ್ನು ತುಳಿದು ಹಾನಿ ಪಡಿಸಿ ಮರೆಯಾಗಿದೆ.
ಮನೆಯಲ್ಲಿ ವಾಸವಿದ್ದವರು ಸಮೀಪದ ಬಂಧುಗಳ ಮನೆಯಲ್ಲಿ ಮಲಗಲು ತೆರಳಿದ ಕಾರಣ ಮನೆಯಲ್ಲಿ ಯಾರು ಇರಲಿಲ್ಲ. ಇದರಿಂದಾಗಿ ಯಾರಿಗೂ ತೊಂದರೆ ಎದುರಾಗಲಿಲ್ಲ. ಮುಂಜಾನೆ ಬಂದು ನೋಡಿದಾಗ ವಿಷಯ ತಿಳಿದಿದೆ.
ಈ ಭಾಗದಲ್ಲಿ ತನ್ನ ಮರಿಯೊಂದಿಗೆ ಆಗಮಿಸುವ ಕಾಡಾನೆ ಮನೆಗಳ ಮೇಲೆ ದಾಳಿ ನಡೆಸಿ ಹಾನಿ ಮಾಡುತ್ತಿರುವುದು ಆಗಿಂದಾಗ್ಗೆ ವರದಿಯಾಗುತ್ತಿದೆ.ಈ ಕಾಡಾನೆಯನ್ನು ಹಿಡಿದು ಮುಂದಾಗಬಹುದಾದ ತೊಂದರೆಯನ್ನು ತಪ್ಪಿಸುವಂತೆ ಹಾಡಿಯ ಜನತೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಮಾಹಿತಿ ತಿಳಿದ ಮತ್ತಿಗೋಡು ವನ್ಯಜೀವಿ ವಿಭಾಗದ ಅರಣ್ಯ ಸಿಬ್ಬಂದಿಗಳಾದ ಶಿವಪ್ಪ ತಿತಿಮತಿ ಲ್ಯಾಂಪ್ ಸೊಸೈಟಿ ಸದಸ್ಯರಾದ ಸಿದ್ದಪ್ಪ, ಅಶೋಕ್, ಮಣಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
- ಹೆಚ್.ಕೆ. ಜಗದೀಶ್