ಮಡಿಕೇರಿ, ಏ. ೨೪: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶತಮಾನೋತ್ಸವದ ಹೊಸ್ತಿಲಿನಲ್ಲಿದ್ದು, ಜೂನ್ ೪ ರಂದು ಮಡಿಕೇರಿಯ ಕಾವೇರಿ ಕಲಾಕ್ಷೇತ್ರದಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೨೧ರ ಜೂನ್ ೨೮ ರಂದು ಸ್ಥಾಪನೆಯಾದ ಈ ಬ್ಯಾಂಕ್ ನೂರಾರು ಜನ ಸಹಕಾರಿಗಳೊಂದಿಗೆ ಅಭಿವೃದ್ಧಿಯಾಗಿ ನಾಡಿನ ಲಕ್ಷಾಂತರ ಜನರಿಗೆ ಅನುಕೂಲ ಕಲ್ಪಿಸಿದೆ. ನೂರಾರು ಸಹಕಾರಿ ಸಂಸ್ಥೆಗಳ ಏಳಿಗೆಗೂ ಕಾರಣವಾಗಿ ರಾಜ್ಯ ಹಾಗೂ ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕಾಗಿ ಮುನ್ನಡೆಯುತ್ತಿದೆ. ಈ ಹಿನ್ನೆಲೆ ಜೂ. ೪ ರಂದು ಶತಮಾನೋತ್ಸವ ಸಮಾರಂಭ ಆಯೋಜಿಸಲಾಗಿದೆ. ಅಂದು ವಿಶೇಷ ರೂಪದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಯಾಗಲಿದೆ. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಭಾ ಕಾರ್ಯಕ್ರಮಕ್ಕೂ ಮುನ್ನ ಬ್ಯಾಂಕ್ ಆವರಣದಲ್ಲಿ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಇತ್ತೀಚಿನ ಬ್ಯಾಂಕಿAಗ್ ವಿದ್ಯಮಾನಗಳಾದ ಆರ್ಟಿಜಿಎಸ್, ನೆಫ್ಟ್, ಕೆಸಿಸಿ ರೂಪೇ ಕಾರ್ಡ್ ಹಾಗೂ ಎಟಿಎಂ ಕಾರ್ಡ್ ವಿತರಣೆ, ಎಟಿಎಂಗಳ ಸ್ಥಾಪನೆ, ಮೊಬೈಲ್ ಬ್ಯಾಂಕಿAಗ್, ಸಹಕಾರ ಸಂಘಗಳಲ್ಲಿ ಮೈಕ್ರೊ ಎಟಿಎಂ ಅಳವಡಿಕೆ, ಸಹಕಾರ ಸಂಘಗಳ ಗಣಕೀಕರಣದಿಂದ ತಾಂತ್ರಿಕವಾಗಿ ಬ್ಯಾಂಕ್ ಮುನ್ನಡೆ ಸಾಧಿಸುತ್ತಿದೆ. ಜಿಲ್ಲೆಯ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಈಗಾಗಲೇ ಮೈಕ್ರೊ ಎಟಿಎಂಗಳನ್ನು ವಿತರಿಸಲಾಗಿದೆ ಎಂದರು.
ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಇಂತಹ ಕಡೆಗಳಲ್ಲಿ ಬ್ಯಾಂಕಿಗೆ ಮೊಬೈಲ್ ವಾಹನವನ್ನು ನಬಾರ್ಡ್ ಸಹಯೋಗದೊಂದಿಗೆ ಪಡೆದು ಗ್ರಾಮೀಣ ಜನತೆಗೆ ಆಧುನಿಕ ಬ್ಯಾಂಕಿAಗ್ ಸೌಲಭ್ಯ ಕಲ್ಪಿಸುವ ಕಾರ್ಯ ನಡೆಯುತ್ತಿದೆ. ಈ ಮೊಬೈಲ್ ಬ್ಯಾಂಕಿAಗ್ ವಾಹನದಲ್ಲಿ ಎಲ್ಲಾ ಸೌಲಭ್ಯಗಳು ಇರಲಿದ್ದು, ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಸ್ಮರಣ ಸಂಚಿಕೆ ಸಮಿತಿಯ ಅಧ್ಯಕ್ಷ ಮನು ಮುತ್ತಪ್ಪ, ಉಪಾಧ್ಯಕ್ಷ ಕೇಟೋಳಿರ ಎಸ್. ಪೂವಯ್ಯ, ಸಮಿತಿ ಸದಸ್ಯ ಬಿ.ಕೆ. ಚಿಣ್ಣಪ್ಪ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್. ಬಾಲಶೇಖರ್ ಹಾಜರಿದ್ದರು.