ಕಣಿವೆ, ಏ. ೨೪: ಕುಶಾಲನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನೀಡುತ್ತಿರುವ ಕೊರೊನಾ ಲಸಿಕಾ ಕೇಂದ್ರದಲ್ಲಿ ಉಂಟಾಗುವ ಜನಸಂದಣಿ ನಿವಾರಿಸಲು ಸ್ಥಳೀಯ ಸಮಾಜ ಸೇವಕ ಜಿ.ಎಲ್.ನಾಗರಾಜು, ಪಟ್ಟಣ ಪಂಚಾಯಿತಿ ಸದಸ್ಯ ಬಿ.ಅಮೃತರಾಜು ಅವರುಗಳು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಧುಸೂದನ್ ಜೊತೆ ಚರ್ಚಿಸಿ ಲಸಿಕಾ ಕೇಂದ್ರಕ್ಕೆ ಅಗತ್ಯವಾಗಿ ಬೇಕಾದ ಮೂವರು ಡಾಟಾ ಎಂಟ್ರಿ ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ನೇಮಕ ಮಾಡುವಲ್ಲಿ ಯಶಸ್ವಿಯಾದರು.

ಆಸ್ಪತ್ರೆಗೆ ನಿತ್ಯವೂ ಎರಡು ಹಂತದ ಲಸಿಕೆ ಹಾಕಿಸಿಕೊಳ್ಳಲು ಬಯಸುವ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುತ್ತಿದ್ದುದರಿಂದ ಲಸಿಕಾ ಕೇಂದ್ರದಲ್ಲಿ ಜನಜಂಗುಳಿ ಹೆಚ್ಚಾಗಿತ್ತು. ಏಕೆಂದರೆ ಡಾಟಾ ಎಂಟ್ರಿ ಪ್ರಕ್ರಿಯೆಗೆ ಇದೂವರೆಗೂ ಒಬ್ಬರೇ ಸಿಬ್ಬಂದಿ ಇದ್ದುದರಿಂದ ತುಂಬಾ ತಡವಾಗುತ್ತಿತ್ತು.

ಇದನ್ನು ಮನಗಂಡ ಜಿ.ಎಲ್. ನಾಗರಾಜು ಡಾಟಾ ಎಂಟ್ರಿ ಬಲ್ಲ ಯಾರಾದರು ಸ್ವಯಂ ಸೇವಕರು ಬಂದಲ್ಲಿ ಅವರಿಗೆ ಗಂಟೆಗೆ ತಲಾ ನೂರು ರೂನಂತೆ ಗೌರವ ಸಂಭಾವನೆಯನ್ನು ಆಸ್ಪತ್ರೆಯಲ್ಲಿ ಸಂಪನ್ಮೂಲ ಇದ್ದರೆ ನೀಡಲಿ. ಇಲ್ಲವಾದಲ್ಲಿ ನಾನೇ ನನ್ನ ಕೈಯಾರೆ ನೀಡುತ್ತೇನೆ ಎಂದು ಆರಂಭಿಕವಾಗಿ ತಮ್ಮ ಮೊಮ್ಮಗನನ್ನು ನಿಯೋಜಿಸಿದರು.

ಬಳಿಕ ಮತ್ತಿಬ್ಬರು ಸ್ವಯಂ ಸೇವಕರು ಧಾವಿಸಿದರು. ಇದೀಗ ಲಸಿಕಾ ಕೇಂದ್ರದಲ್ಲಿ ಲಸಿಕೆ ನೀಡಿಕೆ ಪ್ರಕ್ರಿಯೆ ವೇಗ ಹಾಗೂ ಸರಾಗವಾಗಿ ನಡೆಯಲು ಅನುಕೂಲವಾಗಿದೆ.

ಹಾಗೆಯೇ ಆಸ್ಪತ್ರೆಯ ಮೊದಲ ಮಹಡಿಯಲ್ಲಿನ ಲಸಿಕಾ ಕೇಂದ್ರದ ಬಳಿಯೇ ಇದ್ದ ಕೋವಿಡ್ ಗಂಟಲು ದ್ರವ ತಪಾಸಣಾ ಕೇಂದ್ರವನ್ನು ಹಳೆಯ ಆಯುರ್ವೇದ ಆಸ್ಪತ್ರೆಯ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು ಸಾರ್ವಜನಿಕರು ತಾ ೨೫ ರಿಂದ (ಇಂದಿನಿAದ) ಇಲ್ಲಿ ಸೇವೆ ಬಳಸಿಕೊಳ್ಳುವಂತೆ ಡಾ. ಮಧುಸೂದನ್ ಮನವಿ ಮಾಡಿದ್ದಾರೆ.